Tuesday, November 03, 2026
Menu

ಎಲ್ ನಿನೋ ಪ್ರಭಾವದಿಂದ ಒಣ ಮಾನ್ಸೂನ್ : ಶೇ. 30ರಷ್ಟು ಮಳೆ ಕೊರತೆ, ಕರ್ನಾಟಕಕ್ಕೆ ಅಗ್ರಸ್ಥಾನ

ಉದಯಕಾಲ ನ್ಯೂಸ್, ಹೈದರಾಬಾದ್: ಭಾರತದಲ್ಲಿ ಈ ವರ್ಷದ ಮುಂಗಾರು ಮಳೆಯು ಸಂಪೂರ್ಣವಾಗಿ ಆಶಾದಾಯಕವಾಗಿಲ್ಲದೆ, ದೇಶಾದ್ಯಂತ ‘ಒಣ ಮಾನ್ಸೂನ್’ (Dry Monsoon) ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ ನಿನೋ (El Nino) ವಿದ್ಯಮಾನದ ತೀವ್ರ ಪ್ರಭಾವದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಮುಂಗಾರು ಮಳೆಯ ಪಾಲೇ ಕುಸಿದುಹೋಗಿದೆ. ಕಳೆದ 125 ವರ್ಷಗಳಲ್ಲಿ ಇಂತಹ ದುಸ್ಥಿತಿ ಸಂಭವಿಸಿರುವುದು ಕೇವಲ ನಾಲ್ಕು ಬಾರಿ ಮಾತ್ರ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದತ್ತಾಂಶಗಳು ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿವೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳೇ ಅತ್ಯಧಿಕ ಮಳೆ ಕೊರತೆಯಿಂದ ತತ್ತರಿಸಿದ್ದು, ರಾಜ್ಯದಲ್ಲಿ ಬರೋಬ್ಬರಿ ಶೇ. 30ರಷ್ಟು ಮಳೆ ಕೊರತೆ ದಾಖಲಾಗುವ ಮೂಲಕ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ದಕ್ಷಿಣ ರಾಜ್ಯಗಳಲ್ಲಿ ತೀವ್ರ ಮಳೆ ಕೊರತೆ: ಕರ್ನಾಟಕಕ್ಕೆ ಅಗ್ರ ಸ್ಥಾನ

ಹವಾಮಾನ ಇಲಾಖೆಯ ವರದಿಯ ಪ್ರಕಾರ, 2026ರ ಜೂನ್‌ನಿಂದ ಸೆಪ್ಟೆಂಬರ್ ನಡುವೆ ದೇಶದಲ್ಲಿ ಒಟ್ಟು 759.4 ಮಿ.ಮೀ. ಮಳೆಯಾಗಬೇಕಿದ್ದರೂ, ಎಲ್ ನಿನೋ ಪರಿಣಾಮದಿಂದ ಶೇಕಡಾ 12.6ರಷ್ಟು (109.2 ಮಿ.ಮೀ.) ಕೊರತೆ ಕಂಡುಬಂದಿದೆ. ದೇಶದ ವಿವಿಧ ರಾಜ್ಯಗಳ ಪೈಕಿ ಕರ್ನಾಟಕವು ಶೇ. 30ರಷ್ಟು ಮಳೆ ಕೊರತೆಯನ್ನು ದಾಖಲಿಸುವ ಮೂಲಕ ಅತಿ ಹೆಚ್ಚು ಬಾಧಿತ ರಾಜ್ಯವಾಗಿ ಹೊರಹೊಮ್ಮಿದೆ. ತದನಂತರದ ಸ್ಥಾನಗಳಲ್ಲಿ ಕೇರಳ (ಶೇ. 28), ಆಂಧ್ರಪ್ರದೇಶ (ಶೇ. 25) ಮತ್ತು ತಮಿಳುನಾಡು (ಶೇ. 20) ಇವೆ. ಕೇರಳದಲ್ಲೂ ವಯನಾಡು ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಶೇ. 50ಕ್ಕಿಂತ ಅಧಿಕ ಮಳೆ ಕುಸಿದಿದ್ದು, 1901ರ ನಂತರದ ಏಳನೇ ಕನಿಷ್ಠ ಮಳೆಯೃತುವಾಗಿದೆ. ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲೂ ಮುಂಗಾರು ಕೈಕೊಟ್ಟಿದ್ದು, ಲಕ್ಷಾಂತರ ಜನರು ತೀವ್ರ ನೀರಿನ ಬಿಕ್ಕಟ್ಟು ಹಾಗೂ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಐದು ಬಾರಿ ಬರಕ್ಕೆ ಕಾರಣವಾದ ಎಲ್ ನಿನೋ:ಕೃಷಿಗೆ ಭಾರೀ ಪೆಟ್ಟು

ಚರಿತ್ರೆಯನ್ನು ಗಮನಿಸಿದರೆ 1982, 1987, 2002, 2009 ಮತ್ತು 2015ರಂತಹ ಪ್ರಮುಖ ಬರಗಾಲದ ವರ್ಷಗಳು ಎಲ್ ನಿನೋ ಸಂದರ್ಭದಲ್ಲೇ ಸಂಭವಿಸಿದ್ದು, ಈಗ ಆ ಪಟ್ಟಿಗೆ 2026ನೇ ವರ್ಷವೂ ಸೇರ್ಪಡೆಗೊಂಡಿದೆ. ಜೂನ್ ತಿಂಗಳು ಅಸಾಧಾರಣವಾಗಿ ಒಣಹವೆಯಿಂದ ಕೂಡಿದ್ದು ಶೇ. 40ರಷ್ಟು ಕೊರತೆ ಕಂಡರೆ, ಜುಲೈ ಹಾಗೂ ಆಗಸ್ಟ್‌ನಲ್ಲಿ ಕೆಲವೆಡೆ ಹಠಾತ್ ಸುರಿದ ಧಾರಾಕಾರ ಮಳೆಯು ಪ್ರವಾಹ ಸೃಷ್ಟಿಸಿ ಕೃಷಿ ಭೂಮಿಯ ಮೇಲ್ಪದರದ ಮಣ್ಣನ್ನು ಕೊಚ್ಚಿಕೊಂಡು ಹೋಗಿದೆ. ಮಳೆಯ ಕೊರತೆಯಿಂದಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ದೇಶದ ಇತಿಹಾಸದಲ್ಲೇ ಅತ್ಯಂತ ಬಿಸಿಯಾದ ತಿಂಗಳುಗಳಾಗಿ ದಾಖಲಾಗಿವೆ. ಈ ತಾಪಮಾನ ಏರಿಳಿತ ಹಾಗೂ ಮಳೆಯ ವ್ಯತ್ಯಾಸವು ಜನರ ಆರೋಗ್ಯ, ಪರಿಸರ ಮತ್ತು ಕೃಷಿ ಉತ್ಪನ್ನಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿದ್ದು, ರೈತರನ್ನು ಸಂಕಷ್ಟಕ್ಕೆ ನೂಕಿದೆ.
#ElNino #Monsoon2026 #KarnatakaRain #IMDAlert #Drought2026 #UdayakalaNews #WeatherUpdate #SouthIndiaRain

Related Posts

Leave a Reply

Your email address will not be published. Required fields are marked *