ಮೃತಪಟ್ಟಿರುವ ಗ್ರಾಹಕರೊಬ್ಬರ ಖಾತೆಯಿಂದ ಮತ್ತು ಬ್ಯಾಂಕಿನ ಆಂತರಿಕ ಖಾತೆಯಿಂದ 61.57 ಲಕ್ಷ ರೂ. ದುರುಪಯೋಗಪಡಿಸಿಕೊಂಡ ಆರೋಪದಡಿ ಎಸ್ಬಿಐ ಮಾಜಿ ಮುಖ್ಯ ವ್ಯವಸ್ಥಾಪಕರೊಬ್ಬರನ್ನು ಮೈಸೂರಿನ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ.
ಎವಿ ಕುಲಕರ್ಣಿ ಎಂಬವರ ವಿರುದ್ಧ ಕೋರ್ಟ್ ಆದೇಶಿಸಿದ್ದು, ಒಂದು ವರ್ಷದ ಕಠಿಣ ಜೈಲು ಶಿಕ್ಷೆ ಮತ್ತು ಐವತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ. 2009 ಮತ್ತು 2011 ರ ನಡುವೆ ಈ ವಂಚನೆ ನಡೆದಿವೆ ಎಂದು ಆರೋಪಿಸಲಾಗಿದ್ದು, ಆ ಸಮಯದಲ್ಲಿ ಕುಲಕರ್ಣಿ ಮೈಸೂರಿನ ಚಾಮುಂಡಿಪುರಂನಲ್ಲಿರುವ ಎಸ್ಬಿಐ ಶಾಖೆಯ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಏಪ್ರಿಲ್ 2005 ರಲ್ಲಿ ನಿಧನರಾಗಿದ್ದ ಕೃಷ್ಣ ಅಯ್ಯರ್ ಅವರ ಖಾತೆಯಿಂದ ಕುಲಕರ್ಣಿ 40.53 ಲಕ್ಷ ರೂ ವರ್ಗಾಯಿಸಿದ್ದರು. ಬ್ಯಾಂಕಿನ ಆಂತರಿಕ ಖಾತೆಯಿಂದ 21.04 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರು. ಈ ಹಣವನ್ನು ಕುಲಕರ್ಣಿ ಮತ್ತು ಅವರ ಮಗನ ಖಾತೆಗಳಿಗೆ ವರ್ಗಾಯಿಸಿ ನಂತರ ಹಿಂಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.
ಬ್ಯಾಂಕಿನ ಹಿರಿಯ ಅಧಿಕಾರಿಗಳು ನಡೆಸಿದ ಆಂತರಿಕ ತನಿಖೆಯ ವೇಳೆ ಈ ಅಕ್ರಮ ಪತ್ತೆಯಾಗಿದೆ, ಕುಲಕರ್ಣಿ ಹಣ ವರ್ಗಾಯಿಸಿದ್ದನ್ನು ಒಪ್ಪಿಕೊಂಡಿದ್ದು, ನಂತರ ಬ್ಯಾಂಕ್ಗೆ 62 ಲಕ್ಷ ರೂ. ಮರುಪಾವತಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ತನಿಖೆ ಪೂರ್ಣಗೊಳಿಸಿ ಮೈಸೂರಿನ 1ನೇ ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ವಿ. ತೀರ್ಪು ಪ್ರಕಟಿಸಿದರು.


