Thursday, November 12, 2026
Menu

ಎಥೆನಾಲ್ ಮಿಶ್ರಣದ 63 ಸ್ಯಾಂಪಲ್ ಪರೀಕ್ಷಿಸಿದರೂ ವರದಿ ನೀಡಿಲ್ಲ – ರಿಜ್ವಾನ್ ಅರ್ಷದ್ ವಾಗ್ದಾಳಿ

ಉದಯಕಾಲ ನ್ಯೂಸ್, ದಾವಣಗೆರೆ: ಪೆಟ್ರೋಲ್‌ಗೆ ಮಿತಿಮೀರಿದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದರಿಂದ ಸಾಮಾನ್ಯ ಜನರ ವಾಹನಗಳ ಮೈಲೇಜ್ ಕುಸಿಯುತ್ತಿದೆ ಮತ್ತು ವಾಹನಗಳು ನಿರಂತರವಾಗಿ ರಿಪೇರಿಗೆ ಬರುತ್ತಿವೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ಕೇಂದ್ರ ಸರ್ಕಾರದ ಧೋರಣೆ ಹಾಗೂ ಸಚಿವರ ಮೌನವನ್ನು ಕಟುವಾಗಿ ಟೀಕಿಸಿದರು.

ಮೈಲೇಜ್ ಕುಸಿತ, ರಿಪೇರಿ ಖರ್ಚು ಕೊಡೋರು ಯಾರು?

ಇಂಧನದಲ್ಲಿ ಇ-20 ರಷ್ಟು ಎಥೆನಾಲ್ ಮಿಶ್ರಣ ಮಾಡುವುದರಿಂದಲೇ ವಾಹನಗಳ ಮೈಲೇಜ್ ಕಡಿಮೆಯಾಗುತ್ತದೆ. ಒಂದು ವೇಳೆ ಇ-30 ಅಥವಾ ಇ-40 ರಷ್ಟು ಮಿಶ್ರಣ ಮಾಡಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಸಚಿವರು ಎಚ್ಚರಿಸಿದರು.
ನಾವು ಎಥೆನಾಲ್ ಮಿಶ್ರಣದ ಬಗ್ಗೆ 63 ಸ್ಯಾಂಪಲ್‌ಗಳನ್ನು ಕಳುಹಿಸಿ ಥರ್ಡ್ ಪಾರ್ಟಿ ಲ್ಯಾಬ್ ಮೂಲಕ ಪರಿಶೀಲನೆ ಮಾಡಿಸಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸರಿಯಾದ ಫಲಿತಾಂಶವನ್ನು ನೀಡಿಲ್ಲ. ಇ-20 ಕ್ಕಿಂತ ಹೆಚ್ಚು ಮಿಶ್ರಣ ಮಾಡಬೇಡಿ ಎಂದು ಹೇಳಿದ್ದೇ ನಮ್ಮ ತಪ್ಪಾ? ಜನ ಸಾಮಾನ್ಯರ ವಾಹನಗಳ ಮೈಲೇಜ್ ಕಡಿಮೆಯಾಗಿ ರಿಪೇರಿಗೆ ಬರುತ್ತಿರುವ ಖರ್ಚನ್ನು ಯಾರು ಭರಿಸುವುದು? ಎಂದು ಪ್ರಶ್ನಿಸಿದರು.

ದಾಖಲೆಗಳ ಸಮೇತ ಬಹಿರಂಗ, ಕೇಂದ್ರ ಸಚಿವರ ಮೌನವೇಕೆ?

ತಾವು ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದಲೇ ದಾಖಲೆಗಳ ಸಮೇತ ಈ ವಿಚಾರವನ್ನು ಬಹಿರಂಗಪಡಿಸಿರುವುದಾಗಿ ತಿಳಿಸಿದ ಸಚಿವರು, ಈ ಬಗ್ಗೆ ಕೇಂದ್ರ ಸಚಿವರು ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಮ್ಮನ್ನು ಮೂರ್ಖರು ಎಂದು ಕರೆದಿರುವುದಕ್ಕೆ ತಿರುಗೇಟು ನೀಡಿ, ನಾವು ಮೂರ್ಖರಾದರೆ, ಈ ದೇಶದ ಜನ ಮೂರ್ಖರಲ್ಲ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಕುರಿತು ಮೌನ ವಹಿಸಿದ್ದಾರೆ.

ನಿಮ್ಮದೇ ಇಲಾಖೆಯಲ್ಲಿ ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ನಿಮಗೆ ಗೊತ್ತಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಇಂಧನ ಮಿಶ್ರಣದ ಬಗ್ಗೆ ಪ್ರಶ್ನಿಸಿದರೆ, ಬಿಜೆಪಿ ನಾಯಕರು ನಮ್ಮ ಮೇಲೆಯೇ ಮುಗಿಬೀಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡವರ ಬಿಪಿಎಲ್ ಕಾರ್ಡ್ ರದ್ದಾಗಿಲ್ಲ: ಸ್ಪಷ್ಟನೆ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ರದ್ದತಿ ಕುರಿತು ಮಾತನಾಡಿ, ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡು ಕೇವಲ ಎರಡು ತಿಂಗಳು ಕಳೆದಿದೆ. ಯಾವುದೇ ಕಾರ್ಡ್‌ಗಳನ್ನು ರದ್ದು ಮಾಡದಂತೆ ಸ್ಪಷ್ಟ ನಿರ್ದೇಶನ ನೀಡಿದ್ದೇವೆ. ಕೇಂದ್ರದಿಂದ ಬಂದಿರುವ ಪಟ್ಟಿಯ ಆಧಾರದ ಮೇರೆಗೆ ಕೆಲವು ತಾಂತ್ರಿಕ ವ್ಯತ್ಯಾಸಗಳಾಗಿರಬಹುದು, ಆದರೆ ನಾವು ಯಾವುದೇ ಬಡವರ ಕಾರ್ಡ್ ಡಿಲೀಟ್ ಮಾಡಲು ಅವಕಾಶ ಮಾಡಿಕೊಡುವುದಿಲ್ಲ. ಇ-ಕೆವೈಸಿ ಪ್ರಕ್ರಿಯೆಯನ್ನು ಮುಂದುವರಿಸಲು ಸೂಚಿಸಲಾಗಿದೆ ಎಂದರು. ಅಲ್ಲದೆ, ರಾಜ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 2000 ಲಕ್ಷ ಕೆ.ಜಿ ಅಕ್ಕಿಯನ್ನು ಸೀಜ್ ಮಾಡಲಾಗಿದ್ದು, ಅಕ್ರಮದಲ್ಲಿ ಭಾಗಿಯಾದ 257 ಜನರನ್ನು ಬಂಧಿಸಲಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.
#RizwanArshad #EthanolBlending #PetrolMileage #Davangere #KarnatakaNews #BPLCard #HardeepSinghPuri #PralhadJoshi #UdayakalaNews

Related Posts

Leave a Reply

Your email address will not be published. Required fields are marked *