ಉದಯಕಾಲ ನ್ಯೂಸ್, ಮಂಡ್ಯ: ಪೊಲೀಸರ ಅವೈಜ್ಞಾನಿಕ ತನಿಖೆ ಮತ್ತು ನಿರ್ಲಕ್ಷ್ಯದಿಂದಾಗಿ ಅಮಾಯಕ ಯುವಕನೊಬ್ಬ ಮಾಡದ ತಪ್ಪಿಗೆ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಜೈಲುಪಾಲಾದ ಕರಾಳ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶವವೇ ಸಿಗದೆ, ಮಹಿಳೆಯೊಬ್ಬರ ನಾಪತ್ತೆ ಪ್ರಕರಣವನ್ನು ಕೊಲೆಯಾಗಿದೆಯೆಂದು ತನಿಖೆಯನ್ನೇ ದಿಕ್ಕು ತಪ್ಪಿಸಿ ಪೊಲೀಸರು ದೊಡ್ಡ ತಪ್ಪನ್ನು ಎಸಗಿದ್ದಾರೆ. ಈ ತಪ್ಪಿನಿಂದಾಗಿ ಯುವಕನ ಬದುಕು ನರಕ ಸದೃಶವಾಗಿದೆ.
ಒಂದು ಫೋನ್ ಕಾಲ್ ಅನಾಹುತ
2019ರಲ್ಲಿ ಪಾಂಡವಪುರ ಪಟ್ಟಣದಿಂದ ಮಂಜು ಎಂಬ ಮಹಿಳೆ ದಿಢೀರ್ ನಾಪತ್ತೆಯಾಗಿದ್ದರು. ಈ ಸಂಬಂಧ ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದರು. ಆದರೆ, ತನಿಖೆಯಲ್ಲಿ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಮಂಜು ನಾಪತ್ತೆಗೂ ಮುನ್ನ ಬಸ್ ನಿಲ್ದಾಣದಲ್ಲಿ ಯಾರದ್ದೋ ಮೊಬೈಲ್‌ನಿಂದ ಮಾಡಿದ್ದ ಒಂದು ಕರೆ ಆಧಾರದ ಮೇಲೆ ರಾಗಿಮುದ್ದನಹಳ್ಳಿಯ ರಾಜೇಶ್ ಎಂಬಾತನನ್ನು ಪೊಲೀಸರು ಟಾರ್ಗೆಟ್ ಮಾಡಿದರು. ಆ ಮೊಬೈಲ್ ರಾಜೇಶ್‌ಗೆ ಸೇರಿದ್ದೇ ಆತನಿಗೆ ಮುಳುವಾಯಿತು.
ರಾಜೇಶನೇ ಮಂಜು ಕೊಲೆ ಮಾಡಿದ್ದಾನೆ ಎಂದು ಬಿಂಬಿಸಿದ ಅಂದು ಸೇವೆಯಲ್ಲಿದ್ದ ಪೊಲೀಸರು, ಠಾಣೆಯಲ್ಲಿ ಆತನ ಮೇಲೆ ಅಮಾನವೀಯ ಚಿತ್ರಹಿಂಸೆ ನೀಡಿದ್ದಾರೆ. ಬೂಟುಗಾಲಿನಿಂದ ತುಳಿದು,ಸಿಕ್ಕಾಪಟ್ಟೆ ಥಳಿಸಿ, ಕರೆಂಟ್ ಶಾಕ್ ನೀಡಿ, ಕುಟುಂಬಸ್ಥರನ್ನು ಜೈಲಿಗೆ ಹಾಕುವುದಾಗಿ ಬೆದರಿಸಿ ಬಲವಂತವಾಗಿ ಒಪ್ಪಿಗೆ ಹೇಳಿಕೆ ಬರೆಸಿಕೊಂಡಿದ್ದಾರೆ. ಪೊಲೀಸರ ಈ ಅಟ್ಟಹಾಸಕ್ಕೆ ಮಣಿದ ರಾಜೇಶ್ ತಪ್ಪೊಪ್ಪಿಗೆ ನೀಡಿ 2021ರಲ್ಲಿ ಜೈಲು ಸೇರಬೇಕಾಯಿತು. ನಂತರ 2024ರ ಜನವರಿಯಲ್ಲಿ ಜಾಮೀನಿನ ಮೇಲೆ ಹೊರಬಂದರೂ ಆತನ ಮೇಲಿದ್ದ ‘ಕೊಲೆಗಾರ’ ಎಂಬ ಕಳಂಕ ಪಟ್ಟ ಮಾಯವಾಗಿರಲಿಲ್ಲ.
ವಕೀಲರ ಪರಿಶ್ರಮದಿಂದ ಬಯಲಿಗೆ ಬಂತು ಸತ್ಯ
ತನ್ನ ಮೇಲಿನ ಅಪವಾದವನ್ನು ತೊಡೆದುಹಾಕಲು ರಾಜೇಶ್ ಪರ ವಕೀಲ ನಟೇಶ್ ಅವರು ನಡೆಸಿದ ಖಚಿತ ಕಾರ್ಯಾಚರಣೆ ಇಡೀ ಪ್ರಕರಣಕ್ಕೆ ಮಹಾನ್ ತಿರುವು ನೀಡಿದೆ. ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿಯಲ್ಲಿ ಕೊಲೆಯಾಗಿದ್ದಾಳೆ ಎನ್ನಲಾದ ಅದೇ ಮಂಜು ಸಶರೀರವಾಗಿ ಜೀವಂತವಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಆಕೆಯನ್ನು ಬಿಂಡಿಗನವಿಲೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರ ಮುಂದೆ ಮಂಜು ಅಚ್ಚರಿಯ ಹೇಳಿಕೆ ನೀಡಿದ್ದಾಳೆ.
ತನಗಿಷ್ಟವಿಲ್ಲದ ಮದುವೆ ಮಾಡಿದ್ದರಿಂದ ಬೇಸತ್ತು ತಾನೇ ಸ್ವಯಂಪ್ರೇರಿತವಾಗಿ ಮನೆಬಿಟ್ಟು ಹೋಗಿರುವುದಾಗಿ ಮತ್ತು ಬೇರೊಬ್ಬರನ್ನು ಮದುವೆಯಾಗಿ ಸಂಸಾರ ನಡೆಸುತ್ತಿರುವುದಾಗಿ ಆಕೆ ಸ್ಪಷ್ಟಪಡಿಸಿದ್ದಾಳೆ. ಅಲ್ಲದೆ, ತನಗೂ ರಾಜೇಶ್‌ಗೂ ಯಾವುದೇ ಸಂಬಂಧವಿಲ್ಲ, ಆತ ಯಾರೆಂದೇ ತನಗೆ ಗೊತ್ತಿಲ್ಲ ಎಂದು ತಿಳಿಸುವ ಮೂಲಕ ಪೊಲೀಸರ ಅಸಲಿ ಆಟವನ್ನು ತೆರೆದಿಟ್ಟಿದ್ದಾಳೆ.
ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದರೂ, ತಪ್ಪೇ ಮಾಡದೆ ಎರಡೂವರೆ ವರ್ಷ ಜೈಲು ವಾಸ ಅನುಭವಿಸಿದ ರಾಜೇಶ್ ಹಾಗೂ ಆತನ ಕುಟುಂಬ ಅನುಭವಿಸಿದ ಯಾತನೆ, ಮಾನಸಿಕ ವೇದನೆಗೆ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಇಂತಹ ಬೇಜವಾಬ್ದಾರಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
#MandyaNews #PoliceBlunder #Pandavapura #InnocentInJail #KarnatakaCrime #MandyaPolice #BigTwist


