Menu

ಅಮೆರಿಕದಿಂದ ಜೀವಂತ ಗುಂಡುಗಳನ್ನು ತಂದಿದ್ದಾತ ಬೆಂಗಳೂರಿನಲ್ಲಿ ಅರೆಸ್ಟ್‌

ವಿದೇಶದಿಂದ ಅಕ್ರಮವಾಗಿ ರಿವಾಲ್ವಾರ್‌ನ ಏಳು ಜೀವಂತ ಗುಂಡುಗಳನ್ನು ತಂದಿದ್ದ ಆರೋಪದಡಿ ಅನಿವಾಸಿ ಭಾರತೀಯನೊಬ್ಬನನ್ನು ಬೆಂಗಳೂರು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ.ನಗರದ ಮುತ್ತಾವರ್ ಅರ್ಮಾನ್ ಬಂಧಿತ. ಆರೋಪಿಯಿಂದ ರೂಗರ್ ಕಂಪನಿಯ ಏಳು ಜೀವಂತ ಗುಂಡುಗಳ ಮ್ಯಾಗ್ಜಿನ್‌ ಜಪ್ತಿ ಮಾಡಲಾಗಿದೆ. ಸ್ನೇಹಿತನ ಜತೆ ಹೋಟೆಲ್‌ನಲ್ಲಿ ಪಾರ್ಟಿ ನಡೆಸಲು ಬಂದಿದ್ದ ಅರ್ಮಾನ್ ಮರೆತು ಮ್ಯಾಗ್ಜಿನ್‌ನ್ನು ಬಿಟ್ಟು ಹೋಗಿದ್ದ. ಪೊಲೀಸರಿಗೆ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಆತನನ್ನು ಜೈಲಿಗಟ್ಟಿದ್ದಾರೆ.

ಹಲವು ವರ್ಷಗಳಿಂದ ಅಮೆರಿಕದಲ್ಲಿ ಅರ್ಮಾನ್‌ ನೆಲೆಸಿದ್ದು, ಗ್ರೀನ್ ಕಾರ್ಡ್ ವೀಸಾ ಹೊಂದಿದ್ದು, ಅಮೆರಿಕದಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿದ್ದ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತ್ನಿಯ ಮೊದಲ ಪತಿಗೆ ರಿವಾಲ್ವಾರ್ ತೋರಿಸಿ ಬೆದರಿಕೆ ಹಾಕಿದ ಆರೋಪದಡಿ ಆತನನ್ನು ಬಂಧಿಸಲಾಗಿತ್ತು. ಜಾಮೀನು ಪಡೆಯಲು ಪತ್ನಿಯೇ ನೆರವಾಗಿದ್ದಳು. ಜೈಲಿನಿಂದ ಹೊರಬಂದ ಬಳಿಕ ಬೆಂಗಳೂರಿಗೆ ಬಂದಿದ್ದ.

ಅಮೆರಿಕದಲ್ಲಿ ಪರವಾನಗಿ ಹೊಂದಿದ್ದ ಅರ್ಮಾನ್‌ ಬಳಿ ರೂಗರ್ ಕಂಪನಿಯ ಪಿಸ್ತೂಲ್ ಇದೆ. ಜೀವ ಬೆದರಿಕೆ ಪ್ರಕರಣದಲ್ಲಿ ರಿವಾಲ್ವಾರ್‌ ಪೊಲೀಸರು ಜಪ್ತಿ ಮಾಡಿದ್ದರು. ಬೆಂಗಳೂರಿಗೆ ಬರುವಾಗ ಮ್ಯಾಗ್ಜಿನ್‌ ತಂದಿದ್ದ. ಏ.27ರಂದು ಹೋಟೆಲ್‌ಗೆ ಗೆಳೆಯನ ಜತೆ ಪಾರ್ಟಿ ಮಾಡಲು ಬಂದಿದ್ದಾಗ ಮರೆತು ಮ್ಯಾಗ್ಜಿನ್‌ ಬಿಟ್ಟು ಹೋಗಿದ್ದ. ಮರು ದಿನ ಹೋಟೆಲ್‌ಗೆ ಕರೆ ಮಾಡಿ ತನ್ನ ಮ್ಯಾಗ್ಜಿನ್ ಕಳುಹಿಸುವಂತೆ ಅರ್ಮಾನ್‌ ಕೋರಿದ್ದ. ಹೋಟೆಲ್ ಸಿಬ್ಬಂದಿ, ತಾವೇ ಬಂದು ಮ್ಯಾಗ್ಜಿನ್‌ ತೆಗೆದುಕೊಂಡು ಹೋಗುವಂತೆ ಹೇಳಿದ್ದರು. ಎರಡು ವಾರ ಕಳೆದರೂ ಆತ ಬಾರದೆ ಹೋದಾಗ ಕೊನೆಗೆ ಜೆ.ಸಿ.ನಗರ ಪೊಲೀಸರಿಗೆ ಹೋಟಲ್ ಮ್ಯಾನೇಜರ್ ಪ್ರಕಾಶ್ ಮಾಹಿತಿ ನೀಡಿದರು. ತನಿಖೆಗಿಳಿದ ಪೊಲೀಸರು, ಅರ್ಮಾನ್‌ನನ್ನು ವಶಕ್ಕೆ ಪಡೆದಿದ್ದಾರೆ. ಅಮೆರಿಕ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದಾಗ ಪತ್ತೆಯಾದ ಮ್ಯಾಗ್ಜಿನ್‌ಗೆ ಪರವಾನಗಿ ಇರುವುದು ಗೊತ್ತಾಗಿದೆ. ಭಾರತಕ್ಕೆ ಅಕ್ರಮವಾಗಿ ಅದನ್ನು ತಂದ ಆರೋಪದನ್ವಯ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಅರ್ಮಾನ್‌ನನ್ನು ಕೇಂದ್ರ ಹಾಗೂ ರಾಜ್ಯ ತನಿಖಾ ಏಜೆನ್ಸಿಗಳು ವಿಚಾರಣೆ ನಡೆಸಿ ಮಾಹಿತಿ ಪಡೆದಿವೆ. ಗುಪ್ತದಳ, ರಾಷ್ಟ್ರೀಯ ತನಿಖಾ ದಳ ಹಾಗೂ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *