ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಹೋಲ್ಸೇಲ್ ದರದಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ ಮೂರು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಉದ್ಯಮಿಗೆ ವಂಚಿಸಿರುವ ಘಟನೆ ನಡೆದಿದೆ.
ವಂಚಕರು ಒಂದು ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ನಗರ್ತ ಪೇಟೆಯಲ್ಲಿರುವ ‘ಮೆಹ್ತಾ ಜ್ಯುವೆಲ್ಲರಿ’ ಶಾಪ್ ಮಾಲೀಕರು ವಂಚಕರ ಜಾಲದಲ್ಲಿ ಸಿಲುಕಿ ಮೂರು ಕೋಟಿ ರೂ. ಮೌಲ್ಯದ ಬಂಗಾರ ಕಳೆದುಕೊಂಡಿದ್ದಾರೆ.
ಮೆಹ್ತಾ ಜ್ಯುವೆಲ್ಲರಿ ಮಾಲೀಕರಿಗೆ ಪರೇಶ್ ಸೋನಿ ಎಂಬಾತ ಕರೆ ಮಾಡಿ ‘ಮಾಹಿ ಎಂಟರ್ಪ್ರೈಸಸ್’ ಹೆಸರಿನ ಸಂಸ್ಥೆ ಇದ್ದು, ಹೋಲ್ಸೇಲ್ ದರದಲ್ಲಿ ಭಾರಿ ಪ್ರಮಾಣದ ಆಭರಣಗಳು ಬೇಕಾಗಿವೆ ಎಂದು ನಂಬಿಸಿ ಆಫೀಸ್ಗೆ ಕರೆಸಿಕೊಂಡಿದ್ದ. ತನಗೂ ಮತ್ತು ತನ್ನ ವ್ಯವಹಾರಕ್ಕೂ ಸಂಬಂಧವಿಲ್ಲದ ಮಲ್ಲೇಶ್ವರಂನ ಕಚೇರಿಯೊಂದರ ಬಾಗಿಲಿನ ಮೇಲೆ ‘ಲೋಟಸ್ ಜ್ಯುವೆಲ್ಲರಿ’ ಮತ್ತು ‘ಮಾಹಿ ಎಂಟರ್ಪ್ರೈಸಸ್’ ಎಂದು ನಕಲಿ ಬೋರ್ಡ್ ಹಾಕಿದ್ದ. ವ್ಯಾಪಾರದ ಆರ್ಡರ್ ದೊಡ್ಡದಿದೆ ಎಂದು ನಂಬಿದ ಜ್ಯುವೆಲ್ಲರಿ ಮ್ಯಾನೇಜರ್, ಮಾಲೀಕರ ಸೂಚನೆಯಂತೆ ಚಿನ್ನಾಭರಣಗಳನ್ನು ತೆಗೆದುಕೊಂಡು ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿದ್ದ ಪರೇಶ್ ಸೋನಿ ಕಚೇರಿಗೆ ಹೋಗಿದ್ದರು. ಮ್ಯಾನೇಜರ್ ಆಭರಣ ತಂದಾಗ ವಿನ್ಯಾಸವನ್ನು ಪರಿಶೀಲಿಸುವಂತೆ ನಟಿಸಿ ಪಕ್ಕದ ಕ್ಯಾಬಿನ್ನಲ್ಲಿ ಕುಳಿತಿದ್ದ ಸಹಚರ ಚಂದ್ರಶೇಖರ್ ಎಂಬಾತನಿಗೆ ಒಪ್ಪಿಸಿ ಆಭರಣಗಳ ಪಟ್ಟಿ ಸಿದ್ಧಪಡಿಸಲು ಹೇಳಿದ್ದ.
ಆಭರಣಗಳ ಪೋಟೊ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಹೋದ ಆರೋಪಿಗಳು ಎಷ್ಟು ಹೊತ್ತಾದರೂ ಬಾರದೇ ಇದ್ದಾಗ ಅನುಮಾನಗೊಂಡು ಮ್ಯಾನೇಜರ್ ಪರಿಶೀಲಿಸಿದಾಗ ವಂಚಕರು ಪರಾರಿಯಾಗಿದ್ದರು. ಶ್ಯಾಮ್, ರಾಮಚಂದ್ರ ಹಾಗೂ ಪರೇಶ್ ಸೋನಿ ಎಂಬವರ ವಿರುದ್ಧ ಸಂತ್ರಸ್ತ ಉದ್ಯಮಿ ದೂರು ನೀಡಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


