Tuesday, November 24, 2026
Menu

ಸರ್ಕಾರಿ ಕೆರೆಯಲ್ಲಿ ಗಾಂಜಾ ಕೃಷಿ ಪತ್ತೆ – 25 ಸಸಿಗಳು ಹಾಗೂ ನೀರಾವರಿ ಸಲಕರಣೆ ಜಪ್ತಿ!

ಉದಯಕಾಲ ನ್ಯೂಸ್‌, ಗದಗ: ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ಮತ್ತು ಅಕ್ರಮ ಗಾಂಜಾ ಉತ್ಪಾದನೆ ದಿನೇ ದಿನೇ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಖಾಸಗಿ ಜಮೀನುಗಳಲ್ಲಿ ಅಂತರಬೆಳೆಯಾಗಿ ಗಾಂಜಾ ಬೆಳೆಯುತ್ತಿದ್ದ ದಂಧೆಕೋರರು, ಇದೀಗ ಪೊಲೀಸರ ಕಣ್ಣುತಪ್ಪಿಸಲು ಸರ್ಕಾರಿ ಜಾಗವನ್ನೇ ಅಕ್ರಮ ಕೃಷಿಗೆ ಬಳಸಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಐತಿಹಾಸಿಕ ಶ್ರೀಮಂತಗಡ ಸಮೀಪದ ಸರ್ಕಾರಿ ಕೆರೆಯ ನಿರ್ಜನ ಪ್ರದೇಶದಲ್ಲಿ ಹೈಟೆಕ್ ಮಾದರಿಯಲ್ಲಿ ಬೆಳೆಸಲಾಗಿದ್ದ 25ಕ್ಕೂ ಹೆಚ್ಚು ಗಾಂಜಾ ಸಸಿಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಮುಳ್ಳಿನ ಪೊದೆಯ ಮರೆಯಲ್ಲಿ ಸಿಂಟೆಕ್ಸ್ ಟ್ಯಾಂಕ್, ಪಂಪ್-ಪೈಪ್ ಅಳವಡಿಸಿ ನೀರಾವರಿ!

ಶಿರಹಟ್ಟಿ ತಾಲೂಕಿನ ಶ್ರೀಮಂತಗಡ ಬಳಿಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಸರ್ಕಾರಿ ಕೆರೆಯ ಒಳಭಾಗದ ದಟ್ಟವಾದ ಮುಳ್ಳಿನ ಪೊದೆಗಳ ಮಧ್ಯೆ ಯಾರಿಗೂ ಅನುಮಾನ ಬಾರದಂತೆ ಈ ಗಾಂಜಾ ಕೃಷಿಯನ್ನು ಮಾಡಲಾಗುತ್ತಿತ್ತು. ಸಾರ್ವಜನಿಕರ ಓಡಾಟವಿಲ್ಲದ ನಿರ್ಜನ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದ ಕಿಡಿಗೇಡಿಗಳು, ಸುಮಾರು 25ಕ್ಕೂ ಹೆಚ್ಚು ಗಾಂಜಾ ಸಸಿಗಳನ್ನು ನೆಟ್ಟು ಅತ್ಯಂತ ವ್ಯವಸ್ಥಿತವಾಗಿ ಪೋಷಿಸುತ್ತಿದ್ದರು.

ವಿಶೇಷವೆಂದರೆ, ಈ ಗಿಡಗಳು ಸೊಂಪಾಗಿ ಬೆಳೆಯಲು ದಂಧೆಕೋರರು ಹೈಟೆಕ್ ನೀರಾವರಿ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು. ಸ್ಥಳದಲ್ಲಿ ನೀರಿನ ಸಿಂಟೆಕ್ಸ್ ಟ್ಯಾಂಕ್ , ಪೈಪ್‌ಗಳು ಹಾಗೂ ಮೋಟಾರ್ ಪಂಪ್‌ಗಳನ್ನು ಅಳವಡಿಸಿ, ನಿಯಮಿತವಾಗಿ ಗಾಂಜಾ ಸಸಿಗಳಿಗೆ ನೀರುಣಿಸುವ ಕಾರ್ಯ ನಡೆಯುತ್ತಿತ್ತು. ಸರ್ಕಾರಿ ಕೆರೆಯ ನಡುವೆಯೇ ಇಷ್ಟೊಂದು ಅಚ್ಚುಕಟ್ಟಾಗಿ ಗಾಂಜಾ ತೋಟ ನಿರ್ಮಿಸಿರುವುದನ್ನು ಕಂಡು ಸ್ಥಳೀಯ ಗ್ರಾಮಸ್ಥರು ಹಾಗೂ ಅಧಿಕಾರಿಗಳೇ ದಂಗಾಗಿದ್ದಾರೆ.

ಪೊಲೀಸ್ ಮತ್ತು ತಹಶೀಲ್ದಾರ್ ಜಂಟಿ ದಾಳಿ: ಸಸಿಗಳು, ಸಲಕರಣೆ ವಶಕ್ಕೆ

ಸರ್ಕಾರಿ ಕೆರೆಯ ಅಂಗಳದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಶಿರಹಟ್ಟಿ ಪೊಲೀಸರು ಹಾಗೂ ತಹಶೀಲ್ದಾರ್ ಅವರು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಳ್ಳಿನ ಪೊದೆಗಳನ್ನು ತೆರವುಗೊಳಿಸಿ ಒಳಹೊಕ್ಕು ನೋಡಿದಾಗ, ಸಮೃದ್ಧವಾಗಿ ಬೆಳೆದು ನಿಂತಿದ್ದ 25ಕ್ಕೂ ಹೆಚ್ಚು ಗಾಂಜಾ ಸಸಿಗಳು ಪತ್ತೆಯಾಗಿವೆ.

ತಕ್ಷಣವೇ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸ್ಥಳದಲ್ಲಿದ್ದ ಎಲ್ಲಾ ಗಾಂಜಾ ಸಸಿಗಳನ್ನು ಕಿತ್ತು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಅಕ್ರಮ ಕೃಷಿಗೆ ಬಳಸಲಾಗುತ್ತಿದ್ದ ಸಿಂಟೆಕ್ಸ್ ಟ್ಯಾಂಕ್, ಪೈಪ್‌ಲೈನ್, ಮೋಟಾರ್ ಪಂಪ್ ಸೇರಿದಂತೆ ಇತರೆ ಕೃಷಿ ಸಲಕರಣೆಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳ ಪತ್ತೆಗೆ ಬಲೆ ಬೀಸಿದ ಶಿರಹಟ್ಟಿ ಪೊಲೀಸರು

ಸರ್ಕಾರಿ ಕೆರೆಯ ಜಾಗದಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ಗಾಂಜಾ ಬೆಳೆದಿರುವ ಕಿಡಿಗೇಡಿಗಳು ಯಾರು ಎಂಬುದು ಇನ್ನೂ ನಿಗೂಢವಾಗಿದೆ. ಸುತ್ತಮುತ್ತಲಿನ ಗ್ರಾಮಗಳ ವ್ಯಕ್ತಿಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಹೊರಗಿನ ಮಾದಕ ದ್ರವ್ಯ ಜಾಲದ ಕೈವಾಡವಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೆರೆಗೆ ನೀರು ಮತ್ತು ವಿದ್ಯುತ್ ಸಂಪರ್ಕ ಎಲ್ಲಿಂದ ಪಡೆಯಲಾಗುತ್ತಿತ್ತು ಹಾಗೂ ಸಿಂಟೆಕ್ಸ್ ಟ್ಯಾಂಕ್, ಮೋಟಾರ್ ಪಂಪ್ ಖರೀದಿಸಿದವರು ಯಾರು ಎಂಬ ಜಾಡು ಹಿಡಿದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಈ ಸಂಬಂಧ ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಗ್ರಾಮೀಣ ಭಾಗದ ಸರ್ಕಾರಿ ಜಾಗಗಳು ಮತ್ತು ಅರಣ್ಯದಂಚಿನ ಪ್ರದೇಶಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಕಂದಾಯ ಮತ್ತು ಪೊಲೀಸ್ ಇಲಾಖೆ ನಿರಂತರ ನಿಗಾ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
#GadagNews #IllegalGanjaCultivation #Shirahatti #CannabisSeized #KarnatakaPolice #CrimeNews #DrugFreeKarnataka #Srimanthagad #NDPSAct #GadagPolice #UdayakalaNews #KannadaNews

Related Posts

Leave a Reply

Your email address will not be published. Required fields are marked *