ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ನಗರ ಪಾಲಿಕೆಗಳ ಚುನಾವಣೆ ಜೂನ್ 30ರೊಳಗೆ ಚುನಾವಣೆ ನಡೆಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎಂದು ರಾಜ್ಯ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿದೆ.
ಚುನಾವಣಾ ಪ್ರಕ್ರಿಯೆ ನಡೆಸಲು ಆಯೋಗದ ಬಳಿ ಹಣದ ಕೊರತೆ ಇದೆ. ಮತದಾನ ಪ್ರಕ್ರಿಯೆ ನಿಭಾಯಿಸಲು ಅಗತ್ಯವಿರುವ ಸಿಬ್ಬಂದಿ ಇಲ್ಲದಿರುವುದು ಆಯೋಗಕ್ಕೆ ತೊಡಕಾಗಿದೆ. ರಾಜ್ಯ ಸರ್ಕಾರದ ಸಕ್ರಿಯ ಬೆಂಬಲ ಮತ್ತು ಅನುದಾನ ಅತ್ಯಗತ್ಯ ಎಂದು ಆಯೋಗ ತಿಳಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಜನಗಣತಿ ಮೇ 15ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜನಗಣತಿ ಕಾರ್ಯದಲ್ಲಿ ಬಹುತೇಕ ಸರ್ಕಾರಿ ಸಿಬ್ಬಂದಿ ತೊಡಗಿರುವುದರಿಂದ ಅದು ಮುಗಿಯುವವರೆಗೆ ಚುನಾವಣಾ ಕೆಲಸಗಳಿಗೆ ಸಿಬ್ಬಂದಿ ನಿಯೋಜನೆ ಸಾಧ್ಯವಿಲ್ಲ. ಮೇ 15ರ ನಂತರವಷ್ಟೇ ಐದು ಪಾಲಿಕೆಗಳ ಚುನಾವಣಾ ಪೂರ್ವಸಿದ್ಧತೆಗಳನ್ನು ಆರಂಭಿಸಬಹುದು ಎಂದು ಆಯೋಗ ಹೇಳಿದೆ.
ಬೆಂಗಳೂರು ನಗರ ಪಾಲಿಕೆ ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 2026ರ ಜನವರಿ 12ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ವು, ಜೂನ್ 30ರೊಳಗೆ ಕಡ್ಡಾಯವಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿತ್ತು. ಎದುರಾಗಿರುವ ತಾಂತ್ರಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಈ ಗಡುವಿನೊಳಗೆ ಚುನಾವಣೆ ಮುಗಿಸುವುದು ಆಯೋಗಕ್ಕೆ ಸವಾಲಾಗಿದೆ.
ಸರ್ಕಾರದ ಆರ್ಥಿಕ ನೆರವು ಮತ್ತು ಸಿಬ್ಬಂದಿ ನಿಯೋಜನೆಯಲ್ಲಿ ವಿಳಂಬವಾದರೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಮತದಾರರು ಜನಪ್ರತಿನಿಧಿಗಳ ಆಯ್ಕೆಗಾಗಿ ಇನ್ನೂ ಕೆಲವು ತಿಂಗಳು ಕಾಯುವುದು ಅನಿವಾರ್ಯವಾಗಲಿದೆ.


