ಒಳಮೀಸಲಾತಿಯನ್ನು ಹಂಚಿಕೆ ಮಾಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್ಕೇಪ್ ಸೂತ್ರ ಅನುಸರಿಸಿದ್ದಾರೆ. ಇದರಿಂದ ಯಾವುದೇ ಸಮುದಾಯಕ್ಕೆ ಪ್ರಯೋಜನ ಸಿಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿಯನ್ನು ಹಂಚಿಕೆ ಮಾಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಒಂದು ಕಡೆ ಯುವಜನರು ಸರ್ಕಾರಿ ನೌಕರಿಗಾಗಿ ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಪರಿಶಿಷ್ಟ ಸಮುದಾಯದವರು ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇವೆರಡರಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಈ ನಾಟಕವಾಡುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ 17% ಮೀಸಲು ನೀಡಿತ್ತು. ಗೌರವಾನ್ವಿತ ನ್ಯಾಯಾಲಯಕ್ಕೆ ಈ ಬಗ್ಗೆ ಮನವರಿಕೆ ಮಾಡಬೇಕಿತ್ತು. ಇದರ ಬದಲು ಸರ್ಕಾರ ಎಸ್ಕೇಪ್ ಸೂತ್ರವನ್ನು ಅನುಸರಿಸಿದ್ದು, ಇದರಿಂದ ಪರಿಶಿಷ್ಟ ಸಮುದಾಯಕ್ಕೆ ನಿಜವಾದ ಪ್ರಯೋಜನ ದೊರೆತಿಲ್ಲ ಎಂದರು.
ಬಿಜೆಪಿ ನೀಡಿದ್ದ 17% ಮೀಸಲನ್ನು 15% ಗೆ ಇಳಿಸಿದ್ದು ಏಕೆ? ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವ ಬದಲು ಕಡಿಮೆ ಮಾಡಿರುವುದರಿಂದ ಎಲ್ಲರಿಗೂ ಮೀಸಲಿನಲ್ಲಿ ಅನ್ಯಾಯವಾಗುತ್ತದೆ. 52 ಜಾತಿಗಳು ಸೇರಿದಂತೆ ಯಾವುದೇ ಜಾತಿ ಸಮುದಾಯಗಳನ್ನು ಕರೆದು ಚರ್ಚೆ ಮಾಡಿಲ್ಲ. ಎಲ್ಲ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳ ಅಭಿಪ್ರಾಯ ಪಡೆದು ಈ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಹೇಳಿದರು.
ಒಳಮೀಸಲಾತಿಯ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಒಂದಾಗಬಹುದು. ಆದರೆ ಸಮುದಾಯದ ಜನರು ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತಾರೆ ಎಂದರು.


