ಕೆಪಿಎಸ್ಸಿ ನೇಮಕ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು ಸೇರಿದಂತೆ ಇಡೀ ಹಗರಣದ ತನಿಕೆಗೆ ಎಸ್ಐಟಿ ರಚಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಗೆ ಮನವಿ ಸಲ್ಲಿಸಲು ಮುಂದಾಗಿದೆ.
ತನಿಖಾ ತಂಡದ ನೇತೃತ್ವ ವಹಿಸಬೇಕಾದ ಅಧಿಕಾರಿಯಯ ಹೆಸರನ್ನು ಉಲ್ಲೇಖಿಸಿ ಹೈಕೋರ್ಟ್ ಆದೇಶಿಸಿರುವುದಕ್ಕೆ ಸರ್ಕಾತ ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ. ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕ ಹಾಗೂ ಇತರ ಪರೀಕ್ಷೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪದ ತನಿಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಸಿಐಡಿ ಇಲಾಖೆಯಿಂದ ಹಿಂಪಡೆದು, ಎಸ್ಐಟಿಗೆ ವಹಿಸಿದ್ದರು. ಆದೇಶದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹೆಸರು ಉಲ್ಲೇಖಿಸಿ ಅವರ ನೇತೃತ್ವದಲ್ಲೇ ಎಸ್ಐಟಿ ರಚಿಸುವಂತೆ ಸೂಚಿಸಿದೆ. ಇದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಸಿಐಡಿ ಪ್ರಕರಣದ ಶೇ. 80 ತನಿಖೆ ಮುಗಿಸಿದೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸೇರಿದಂತೆ ಹಲವರನ್ನು ಬಂಧಿಸಿ ಮಹತ್ವದ ದಾಖಲೆ, ಹಣ, ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮ್ಮ ಅಧಿಕಾರಿಗಳು ದಕ್ಷವಾಗಿ ಕೆಲಸ ಮಾಡುತ್ತಿರುವಾಗ ನಿರ್ದಿಷ್ಟ ಅಧಿಕಾರಿಗಳನ್ನೇ ಹೆಸರಿಸಿ ಎಸ್ಐಟಿ ರಚಿಸಲು ಹೇಳಿರುವುದು ತಪ್ಪು ಸಂದೇಶ ರವಾನಿಸುತ್ತದೆ ಎಂಬುದು ಸರ್ಕಾರದ ವಾದ.
ಈ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯಾವ ಅಧಿಕಾರಿಯನ್ನು ತನಿಖಾ ತಂಡಕ್ಕೆ ನೇಮಿಸಬೇಕು ಎಂಬುದು ಕಾರ್ಯಾಂಗದ (ಸರ್ಕಾರದ) ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ನ್ಯಾಯಾಲಯಗಳು ಹೇಗೆ ಹಸ್ತಕ್ಷೇಪ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ವಿಚಾರಣೆ ವೇಳೆ ಸಂಗ್ರಹವಾಗುವ ಸಾಕ್ಷ್ಯಗಳು ಬೇರೆ ಯಾವುದೇ ವ್ಯಕ್ತಿಗಳು, ಇತರ ಅಕ್ರಮಗಳು ಅಥವಾ ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿರುವುದು ಕಂಡುಬಂದರೆ, ಸಾಕ್ಷ್ಯಗಳು ಎಲ್ಲಿಗೆ ಕರೆದೊಯ್ಯುತ್ತವೆಯೋ ಅಲ್ಲಿಯವರೆಗೂ ಕಾನೂನು ಪ್ರಕಾರ ತನಿಖೆ ಮುಂದುವರಿಸಲು ಎಸ್ಐಟಿಗೆ ಮುಕ್ತ ಅಧಿಕಾರ ನೀಡಲಾಗಿದೆ. ಇದರಿಂದ ಹಲವು ಪ್ರಭಾವಿಗಳು, ಶಾಸಕರು ಮತ್ತು ಸಚಿವರ ಹೆಸರು ಹೊರಬರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.


