Thursday, November 12, 2026
Menu

ಚಳಿಗಾಲದ ಅಧಿವೇಶನಕ್ಕೆ ಉತ್ತಮ ತಯಾರಿ: ಪೊಲೀಸ್ ಸರ್ಪಗಾವಲು, ಡ್ರೋನ್‌ ಹದ್ದಿನ ಕಣ್ಣು!

ಉದಯಕಾಲ ನ್ಯೂಸ್, ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಡಿಸೆಂಬರ್ 2ರಿಂದ 11ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದ್ದು, ಸುವರ್ಣಸೌಧದಲ್ಲಿ ಸುಗಮ ಕಲಾಪ ಹಾಗೂ ಬಿಗಿ ಭದ್ರತೆಗಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ರೈತರು, ಕಾರ್ಮಿಕರು ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಭದ್ರತೆಗೆ 7 ಸಾವಿರ ಪೊಲೀಸ್ ಹಾಗೂ ಕೆಎಸ್‌ಆರ್‌ಪಿ ತುಕಡಿ

ಅಧಿವೇಶನದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬರೋಬ್ಬರಿ 7 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಬೆಳಗಾವಿ ನಗರ ಮತ್ತು ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದಲೂ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುತ್ತಿದೆ. ಇದರೊಂದಿಗೆ 35 ಕೆಎಸ್‌ಆರ್‌ಪಿ ತುಕಡಿಗಳನ್ನು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಅವರ ನೇತೃತ್ವದಲ್ಲಿ ಈಗಾಗಲೇ ಸುವರ್ಣಸೌಧ ಸೇರಿದಂತೆ ಪ್ರಮುಖ ಸ್ಥಳಗಳ ಪರಿಶೀಲನೆ ನಡೆಸಲಾಗಿದೆ.

600 ಸಿಸಿಟಿವಿ ಕ್ಯಾಮೆರಾ ಹಾಗೂ 10 ಡ್ರೋನ್‌ಗಳಿಂದ ನಿಗಾ

ಪ್ರತಿಭಟನಾ ಸ್ಥಳಗಳು, ಪ್ರಮುಖ ರಸ್ತೆಗಳು ಹಾಗೂ ಸುವರ್ಣಸೌಧದ ಸುತ್ತಮುತ್ತಲಿನ ಪ್ರದೇಶಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭದ್ರತಾ ವ್ಯವಸ್ಥೆಯ ಭಾಗವಾಗಿ ಹೆಚ್ಚುವರಿಯಾಗಿ 600 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಜನಸಂದಣಿ ಹಾಗೂ ಪ್ರತಿಭಟನೆಗಳು ಹೆಚ್ಚಿರುವ ಪ್ರದೇಶಗಳನ್ನು ಗಮನಿಸಲು 10 ಡ್ರೋನ್‌ಗಳನ್ನು ಬಳಸಲು ಯೋಜಿಸಲಾಗಿದೆ. ಇದರಿಂದ ಒಟ್ಟು ಪರಿಸ್ಥಿತಿಯ ಮೇರೆಗೆ ನಿರಂತರ ನಿಗಾ ವಹಿಸಲು ಸಾಧ್ಯವಾಗಲಿದೆ.

ಪೊಲೀಸರಿಗೆ ‘ಟೆಂಟ್ ಟೌನ್‌ಶಿಪ್’: ಸುವರ್ಣಸೌಧಕ್ಕೆ ಸ್ವಚ್ಛತೆಯ ಸ್ಪರ್ಶ

ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ ಆಗಮಿಸುವ ಸಾವಿರಾರು ಪೊಲೀಸರ ವಾಸ್ತವ್ಯಕ್ಕಾಗಿ ಶಿಂದೊಳ್ಳಿ ಗ್ರಾಮದಲ್ಲಿ ವಿಶೇಷವಾದ ‘ಟೆಂಟ್ ಟೌನ್‌ಶಿಪ್’ ನಿರ್ಮಿಸಲಾಗುತ್ತಿದೆ. ಇಲ್ಲಿ 7 ಸಾವಿರ ಸಿಬ್ಬಂದಿಗೆ ವಸತಿ, ಊಟ, ಚಳಿಗಾಲದ ಹಿನ್ನೆಲೆಯಲ್ಲಿ ಬಿಸಿನೀರು, ಹಾಸಿಗೆ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮತ್ತೊಂದೆಡೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸುವರ್ಣಸೌಧದ ಆವರಣದಲ್ಲಿ ಸ್ವಚ್ಛತಾ ಕಾರ್ಯಗಳು ಭರದಿಂದ ಸಾಗಿದ್ದು, ನವೆಂಬರ್ 15ರಿಂದ ಜನವರಿ 15ರವರೆಗೆ ಸುವರ್ಣಸೌಧದ ಸುತ್ತಮುತ್ತ 2 ರಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
#BelagaviWinterSession #SuvarnaSoudha #BelagaviPolice #KarnatakaAssembly #WinterSession2026 #UdayakalaNews

Related Posts

Leave a Reply

Your email address will not be published. Required fields are marked *