Thursday, November 12, 2026
Menu

ಡಿಪೋದಲ್ಲಿ ಮಹಿಳಾ ಮೆಕ್ಯಾನಿಕ್‌ಗೆ ಚಾಕುವಿನಿಂದ ಚುಚ್ಚಿದ ಸಹೋದ್ಯೋಗಿ!

ಉದಯಕಾಲ ನ್ಯೂಸ್, ಬೆಂಗಳೂರು: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಮಹಿಳಾ ಮೆಕ್ಯಾನಿಕ್ ಮೇಲೆ ಕೆಲಸದಿಂದ ಅಮಾನತುಗೊಂಡಿರುವ ಸಹೋದ್ಯೋಗಿಯೊಬ್ಬ ಏಕಾಏಕಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ಹಳೆಯ ವೈಷಮ್ಯ ಹಾಗೂ ಸಾಕ್ಷಿ ಹೇಳಿದ್ದಕ್ಕಾಗಿ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸಾಕ್ಷಿ ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ

ನೆಲಮಂಗಲ ನಗರದ ಅರಿಶಿನಕುಂಟೆ ಬಳಿಯಿರುವ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿರುವ 40 ವರ್ಷದ ಲಕ್ಷ್ಮಿ ಎಂಬುವವರೇ ಈ ಹಲ್ಲೆಗೊಳಗಾದ ದುರ್ದೈವಿ. ನಿನ್ನೆ ರಾತ್ರಿ ಸುಮಾರು 8:30ರ ವೇಳೆಗೆ ಲಕ್ಷ್ಮಿ ಅವರು ತಮ್ಮ ದೈನಂದಿನ ಕೆಲಸ ಮುಗಿಸಿ ಮನೆಗೆ ತೆರಳಲು ಸಿದ್ಧರಾಗಿದ್ದರು. ಈ ವೇಳೆ ಅಲ್ಲಿಗೆ ಬಂದ ಅಮಾನತುಗೊಂಡಿರುವ ಪಾತಕಿ ಸಹೋದ್ಯೋಗಿ ಶಿವರಾಜ್ ಎಂಬಾತ, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಲಕ್ಷ್ಮಿ ಅವರ ಮೇಲೆ ಚಾಕುವಿನಿಂದ ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಅವರು ಆರೋಪಿ ಶಿವರಾಜ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸಾಕ್ಷಿ ಹೇಳಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ತೀವ್ರ ದ್ವೇಷ ಸಾಧಿಸುತ್ತಿದ್ದ ಶಿವರಾಜ್, ಅವಕಾಶಕ್ಕಾಗಿ ಕಾಯುತ್ತಿದ್ದು ಈ ಬರ್ಬರ ಕೃತ್ಯವೆಸಗಿದ್ದಾನೆ. ಆರೋಪಿ ಶಿವರಾಜ್ ಕಳೆದ ಕೆಲವು ತಿಂಗಳುಗಳಿಂದಲೇ ಕರ್ತವ್ಯದಿಂದ ಅಮಾನತುಗೊಂಡಿದ್ದ ಎಂಬ ಗಂಭೀರ ಮಾಹಿತಿಯೂ ಲಭ್ಯವಾಗಿದೆ.

ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು: ಆರೋಪಿಗಾಗಿ ಶೋಧ

ಚಾಕು ಇರಿತದಿಂದ ತೀವ್ರವಾಗಿ ರಕ್ತಸ್ರಾವಗೊಂಡು ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮಿ ಅವರನ್ನು ಸ್ಥಳೀಯರು ಹಾಗೂ ಡಿಪೋ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸೆದು ತಲೆಮರೆಸಿಕೊಂಡಿರುವ ವಿಕೃತಿ ಮೆರೆದ ಆರೋಪಿ ಶಿವರಾಜ್ ಪತ್ತೆಗಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ಬಲೆ ಬೀಸಿದ್ದಾರೆ. ಮಹಿಳಾ ಉದ್ಯೋಗಿಯೊಬ್ಬರ ಮೇಲೆ ಡಿಪೋ ಆವರಣದಲ್ಲೇ ಈ ರೀತಿಯ ದಾಳಿ ನಡೆದಿರುವುದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

#KSRTC #Nelamangala #BangaloreNews #KSRTCLaxmi #CrimeNews #UdayakalaNews #KarnatakaPolice

Related Posts

Leave a Reply

Your email address will not be published. Required fields are marked *