Menu

ಗೋಹತ್ಯೆ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ; ತೀರ್ಪಿನಲ್ಲಿ ಮನುಸ್ಮೃತಿ ಉಲ್ಲೇಖ

ಉದಯಕಾಲ ನ್ಯೂಸ್, ಗಾಂಧೀನಗರ: ದೇಶಾದ್ಯಂತ ಸಂಚಲನ ಮೂಡಿಸಿರುವ ಗೋಹತ್ಯೆ ಪ್ರಕರಣವೊಂದರಲ್ಲಿ ಗುಜರಾತ್‌ನ ಗಾಂಧೀನಗರ ಜಿಲ್ಲೆಯ ಕಲೋಲ್ ನ್ಯಾಯಾಲಯವು ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ವಿಶೇಷವೆಂದರೆ, ಈ ತೀರ್ಪಿನಲ್ಲಿ ನ್ಯಾಯಾಲಯವು ‘ಮನುಸ್ಮೃತಿ’ ಹಾಗೂ ಇತರ ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸಿರುವುದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕಠಿಣ ಕಾನೂನು

ಗುಜರಾತ್ ಸರ್ಕಾರವು 2011ರಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‘ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯಿದೆ, 1954’ಕ್ಕೆ ಮಹತ್ವದ ತಿದ್ದುಪಡಿ ತಂದಿತ್ತು. ಬಳಿಕ 2017ರಲ್ಲಿ ಈ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ಗೋಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಗುಜರಾತ್ ದೇಶದಲ್ಲೇ ಪ್ರಥಮ ರಾಜ್ಯವಾಗಿ ಹೊರಹೊಮ್ಮಿತು.

ಈ ಕಾಯ್ದೆಯ ಅಡಿಯಲ್ಲಿ, ಗೋಮಾಂಸ ಸಂಗ್ರಹಣೆ, ಮಾರಾಟ ಹಾಗೂ ಸಾಗಾಟಕ್ಕೆ ಕಠಿಣ ಜೈಲು ಶಿಕ್ಷೆ ಮತ್ತು ದಂಡದ ಜೊತೆಗೆ ಜಾಮೀನು ಸಿಗದಂತೆ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಇದೀಗ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ರಜಪೂತ್ ಅವರು ಈ ಪ್ರಕರಣದ ವಿಚಾರಣೆ ನಡೆಸಿ 76 ಪುಟಗಳ ತೀರ್ಪನ್ನು ಪ್ರಕಟಿಸಿದ್ದಾರೆ.

ತೀರ್ಪಿನಲ್ಲಿ ಮನುಸ್ಮೃತಿ ಮತ್ತು ಧರ್ಮಗ್ರಂಥಗಳ ಉಲ್ಲೇಖ

ಆರೋಪಿಗಳು ಗೋವುಗಳ ಬಾಯಿ, ಹೊಟ್ಟೆ, ಕಾಲುಗಳು ಮತ್ತು ಚರ್ಮವನ್ನು ಕತ್ತರಿಸಿ, ಮಾರಾಟಕ್ಕಾಗಿ ಬರೋಬ್ಬರಿ 277 ಕೆ.ಜಿ.ಯಷ್ಟು ಗೋಮಾಂಸವನ್ನು ಹೊರತೆಗೆದು ಕ್ರೌರ್ಯ ಮೆರೆದಿದ್ದಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಕಟುವಾಗಿ ಟೀಕಿಸಿದೆ. ಗೋವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಲು ನ್ಯಾಯಾಲಯವು ವೇದಗಳು ಹಾಗೂ ಮನುಸ್ಮೃತಿಯನ್ನು ಉಲ್ಲೇಖಿಸಿದೆ.

ಮನುಸ್ಮೃತಿಯಲ್ಲಿ ಗೋವನ್ನು ಕೇವಲ ಪ್ರಾಣಿಯನ್ನಾಗಿ ನೋಡದೆ, ಧಾರ್ಮಿಕ ಕರ್ತವ್ಯದ ಒಂದು ಪ್ರಮುಖ ಆಧಾರಸ್ತಂಭವೆಂದು ಪರಿಗಣಿಸಲಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಪಶುಸಂಪತ್ತನ್ನು ರಕ್ಷಿಸುವ ಜವಾಬ್ದಾರಿಯನ್ನು ಹಿಂದೆ ಮನು ಮಹರ್ಷಿಗಳು ವಹಿಸಿಕೊಟ್ಟಿದ್ದರು ಎಂಬುದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಕೃತ್ಯ ಎಸಗುವವರನ್ನು ಕಠಿಣವಾಗಿ ಶಿಕ್ಷಿಸದಿದ್ದರೆ ಮುಂದೊಂದು ದಿನ ಗೋಸಂಪತ್ತು ಸಂಪೂರ್ಣವಾಗಿ ಅಳಿದುಹೋಗುವ ಅಪಾಯವಿದೆ ಎಂದು ಕೋರ್ಟ್ ಎಚ್ಚರಿಸಿದೆ.

#CowSlaughter #GujaratCourt #Manusmriti #LifeImprisonment #UdayakalaNews #LawAndOrder #LegalUpdate

Related Posts

Leave a Reply

Your email address will not be published. Required fields are marked *