ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ವಿಶ್ವ ಹಿಂದೂ ಪರಿಷತ್ (VHP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಈ ಸಂಘಟನೆಗಳು ಸನಾತನ ಧರ್ಮವನ್ನು ವಿರೂಪಗೊಳಿಸುತ್ತಿವೆ ಎಂದು ಆರೋಪಿಸಿದ್ದಾರೆ. ಹಿಂದುತ್ವದ ಪರಿಕಲ್ಪನೆಯ ಮೂಲಕ ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣವಾದ ‘ಎಕ್ಸ್’ (X) ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಅವರು, ಹಿಂದುತ್ವದ ಕುರಿತಾದ ನಿರಂತರ ಹೇಳಿಕೆಗಳು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದು ಹಿಂದೂಗಳು ಹಾಗೂ ಇತರ ಧರ್ಮಗಳ ನಡುವೆ ಬಿರುಕು ಮೂಡಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಧರ್ಮಗ್ರಂಥಗಳಲ್ಲಿ ‘ಹಿಂದೂ’ ಪದವಿಲ್ಲ
“ಇಂದಿನ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ‘ಹಿಂದೂ’ ಎಂಬ ಪದ ಕಂಡುಬರುವುದಿಲ್ಲ. ಇಂದು ಯಾರೂ ಹಿಂದೂ ಧರ್ಮದ ಬಗ್ಗೆ ಮಾತನಾಡುವುದಿಲ್ಲ, ಬದಲಿಗೆ ಜನರು ಸನಾತನ ಧರ್ಮದ ಬಗ್ಗೆ ಮಾತನಾಡುತ್ತಾರೆ. ವೇದಗಳು, ಉಪನಿಷತ್ತುಗಳು ಅಥವಾ ಪುರಾಣಗಳು ಹೀಗೆ ನಮ್ಮ ಯಾವುದೇ ಧರ್ಮಗ್ರಂಥಗಳಲ್ಲಿ ಹಿಂದೂ ಎಂಬ ಪದ ಎಲ್ಲೂ ಸಿಗುವುದಿಲ್ಲ. ಆದರೆ ವಿಹೆಚ್‌ಪಿ ಮತ್ತು ಆರ್‌ಎಸ್‌ಎಸ್ ಇದೇ ಸನಾತನ ಧರ್ಮವನ್ನು ವಿರೂಪಗೊಳಿಸುತ್ತಿವೆ” ಎಂದು ದಿಗ್ವಿಜಯ್ ಸಿಂಗ್ ದೂರಿದ್ದಾರೆ.
ಸಾವರ್ಕರ್ ರೂಪಿಸಿದ ಹಿಂದುತ್ವ ಪರಿಕಲ್ಪನೆಯ ಪ್ರಭಾವದಿಂದಾಗಿ ಧರ್ಮದ ಚರ್ಚೆಯು ನಿರಂತರವಾಗಿ ವಿವಾದದ ಹಾದಿ ಹಿಡಿದಿದೆ ಎಂದಿರುವ ಅವರು, ಇದರಿಂದಾಗಿ ದೇಶಾದ್ಯಂತ ಹಿಂದೂಗಳು-ಮುಸ್ಲಿಮರು, ಹಿಂದೂಗಳು-ಸಿಖ್ಖರು ಹಾಗೂ ಹಿಂದೂಗಳು-ಕ್ರೈಸ್ತರ ನಡುವೆ ಬಿರುಕುಗಳು ಉಂಟಾಗುತ್ತಿವೆ. ಆದರೆ ಭಾರತ ಎಲ್ಲರಿಗೂ ಸೇರಿದ್ದಾಗಿದ್ದು, ವೈವಿಧ್ಯತೆಯಲ್ಲಿ ಏಕತೆಯೇ ನಮ್ಮ ಶಕ್ತಿ ಎಂದು ಪ್ರತಿಪಾದಿಸಿದ್ದಾರೆ.
ರಾಮಮಂದಿರ ನಿಧಿ ಲೂಟಿ;ವಿಹೆಚ್‌ಪಿಯಿಂದ ಬಿಜೆಪಿಗೆ ಪಾರ್ಟಿ ಫಂಡ್!
ಅಯೋಧ್ಯೆಯ ರಾಮಮಂದಿರಕ್ಕಾಗಿ ಸಂಗ್ರಹಿಸಲಾದ ನಿಧಿಯ ವಿಷಯದಲ್ಲಿ ದೇವಾಲಯದ ಆಡಳಿತ ಮಂಡಳಿ ಮತ್ತು ಬಲಪಂಥೀಯ ಸಂಘಟನೆಗಳ ವಿರುದ್ಧ ಗಂಭೀರ ಆರ್ಥಿಕ ಆರೋಪಗಳನ್ನು ಮಾಡಿರುವ ಅವರು, ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ವಂಚನೆ ಎಸಗಲಾಗಿದೆ ಎಂದಿದ್ದಾರೆ. ಚಂಪತ್ ರಾಯ್ ಒಬ್ಬ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದು, ಅವರಿಗೆ ಧರ್ಮ ಅಥವಾ ಸನಾತನ ಸಂಪ್ರದಾಯಗಳೊಂದಿಗೆ ಯಾವುದೇ ನೈಜ ಸಂಬಂಧವಿಲ್ಲ, ಅವರು ಸಂಪೂರ್ಣವಾಗಿ ಆರ್‌ಎಸ್‌ಎಸ್ ಏಜೆಂಟ್ ಎಂದು ಹರಿಹಾಯ್ದಿದ್ದಾರೆ. ವಿಶ್ವ ಹಿಂದೂ ಪರಿಷತ್ ಮೂಲಕ ಸ್ವೀಕರಿಸಲಾಗುವ ಕಾಣಿಕೆಗಳನ್ನು ಸಂಪೂರ್ಣವಾಗಿ ಬಿಜೆಪಿಯ ಚುನಾವಣಾ ನಿಧಿಗೆ ಬಳಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಯಿಂದ ತೀವ್ರ ಆಕ್ಷೇಪ
ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಗೆ ಮಧ್ಯಪ್ರದೇಶದ ಸಚಿವ ವಿಶ್ವಾಸ್ ಸಾರಂಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಗಳು, ಸಂತರು ಮತ್ತು ಸನಾತನ ಧರ್ಮವನ್ನು ಪದೇ ಪದೇ ಅವಮಾನಿಸುತ್ತಿರುವ ಕಾಂಗ್ರೆಸ್ ನಾಯಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
#DigvijayaSingh #RSS #VHP #SanatanDharma #Hindutva #Congress #RamMandirFunds #BJP #UdayakalaNews #PoliticalNews2026
—


