ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕ-ಇರಾನ್ ಯುದ್ಧ ನಿಲ್ಲಿಸುವ ಕುರಿತು ಶಾಂತಿ ಮಾತುಕತೆ ಆರಂಭಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಾಯಕರ ನಡುವಿನ ವಾಗ್ದಾಳಿ ಮುಂದುವರಿದಿದೆ. ಇರಾನ್ ಮೇಲೆ ಮತ್ತೊಮ್ಮೆ ಭೀಕರ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದು, ನಮ್ಮ ಸಶಸ್ತ್ರ ಪಡೆಗಳು ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿವೆ, ಜಾಗೂಕತೆಯಿಂದ ಇರಿ ಎಂದು ಇರಾನ್ ಪ್ರತಿಕ್ರಿಯಿಸಿದೆ.
ಟ್ರಂಪ್ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಹಾಕಿ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿ, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಸೇರಿದಂತೆ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು, ಇಲ್ಲದಿದ್ದರೆ ಕಳೆದ ವಾರ ನಾವು ಇರಾನ್ ಮೇಲೆ ಮಾಡಿದ ದಾಳಿಗಿಂತಲೂ ನೂರು ಪಟ್ಟು ಹೆಚ್ಚು ಕಠಿಣವಾದ ಸೇನಾ ದಾಳಿಯನ್ನು ಅಮೆರಿಕ ನಡೆಸಲಿದೆ ಎಂದು ಟ್ರಂಪ್ ಬೆದರಿಸಿದ್ದಾರೆ.
ಟ್ರಂಪ್ ಅವರ ಈ ಬೆದರಿಕೆಗೆ ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್ ತಿರುಗೇಟು ನೀಡಿದ್ದು, ಅಮೆರಿಕದ ಬೆದರಿಕೆಗಳಿಗೆ ನಾವು ಬೆಲೆ ಕೊಡುವುದಿಲ್ಲ. ಟ್ರಂಪ್ ಹೇಳಿಕೆ ನೀಡುವಾಗ ಜಾಗರೂಕರಾಗಿರಬೇಕು. ಅವರ ಬೆದರಿಕೆ ನಿಜ ಆಗಿದ್ದರೆ ಅಮೆರಿಕ ಈ ಮಟ್ಟದ ಹತಾಶೆಗೆ ತಲುಪುತ್ತಿರಲಿಲ್ಲ. ನಮ್ಮ ಸಶಸ್ತ್ರ ಪಡೆಗಳು ವಿಭಿನ್ನವಾಗಿ ಪ್ರತಿಕ್ರಿಯಿಸಲು ಸಜ್ಜಾಗಿವೆ. ನಾವು ಮಾತನಾಡುವವರಲ್ಲ, ಯುದ್ಧಭೂಮಿಯಲ್ಲಿ ಕಾರ್ಯ ನಿರ್ವಹಿಸುವವರು ಎಂದು ಹೇಳಿದ್ದಾರೆ.


