Menu

ಬಿಎಂಟಿಸಿ, ಕೆಎಸ್ಸಾರ್ಟಿಸಿ ಟಿಕೆಟ್‌ ದರ 44%, 33% ಹೆಚ್ಚಳ?

ಆರ್ಥಿಕ ನಷ್ಟ ಹಾಗೂ ಡೀಸೆಲ್‌ ದರ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಮತ್ತು ಕೆಎಸ್ಸಾರ್ಟಿಸಿ ಬಸ್ ಟಿಕೆಟ್ ದರವನ್ನು ಹೆಚ್ಚಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಿವೆ.

ಬಿಎಂಟಿಸಿ ಟಿಕೆಟ್ ದರದಲ್ಲಿ 44%, ಕೆಎಸ್ಸಾರ್ಟಿಸಿ 33% ರಷ್ಟು ಹೆಚ್ಚಿಸಲು ಅನುಮತಿ ಕೋರಿದೆ. ಕಲ್ಯಾಣ ಕರ್ನಾಟಕ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳೂ ದರ ಏರಿಕೆಗೆ ಆಗ್ರಹಿಸಿವೆ.

ಕರ್ನಾಟಕ ಸರ್ಕಾರ ಜನವರಿ 5, 2025 ರಿಂದ ಜಾರಿಗೆ ಬರುವಂತೆ ಸರ್ಕಾರಿ ಬಸ್‌ಗಳ ಟಿಕೆಟ್‌ ದರ 15% ಹೆಚ್ಚಳ ಮಾಡಿತ್ತು. ಮೇ 25 ರವರೆಗಿನ ಇಂಧನ ದರ ಏರಿಕೆಯು ಸಾರಿಗೆ ನಿಗಮಗಳಿಗೆ ಸಂಕಷ್ಟ ತಂದೊಡ್ಡಿವೆ, ಹತ್ತು ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ಡೀಸೆಲ್ ದರ ಏರಿಕೆಯಾಗಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 7.81 ರೂ. ಹೆಚ್ಚಳವಾಗಿದೆ. ಪ್ರತಿದಿನ ಎಲ್ಲ ಸಾರಿಗೆ ನಿಗಮಗಳ ಬಸ್‌ಗಳಿಗೆ 13 ಲಕ್ಷ ಲೀಟರ್‌ಗೂ ಹೆಚ್ಚು ಡೀಸೆಲ್ ಬಳಕೆಯಾಗುತ್ತಿದೆ. ನಿಗಮಗಳಿಗೆ ತಿಂಗಳಿಗೆ 40 ಕೋಟಿ ರೂ. ಹಾಗೂ ವರ್ಷಕ್ಕೆ ಬರೋಬ್ಬರಿ 480 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಟಿಕೆಟ್‌ ದರ ಏರಿಕೆ ಆಗ್ರಹವನ್ನು ಅಧಿಖಾರಿಗಳು ಸಮರ್ಥಿಸಿಕೊಂಡಿದ್ದಾರೆ.

ನಿಗಮಗಳಿಗೆ ಡೀಸೆಲ್ ದರ, ನಿರ್ವಹಣಾ ವೆಚ್ಚ ಹೆಚ್ಚಳ ಹೊರೆ ಮಾತ್ರವಲ್ಲದೆ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇ.12.5 ಹೊಸ ವೇತನ ನೀಡಬೇಕಾಗಿದೆ. ನೌಕರರಿಗೆ ನೀಡಬೇಕಿರುವ ಒಟ್ಟು ₹1,271 ಕೋಟಿ ರೂ. ವೇತನ ಹಿಂಬಾಕಿ ಹಣದಲ್ಲಿ ₹450 ಕೋಟಿರೂ. ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ ₹821 ಕೋಟಿ ರೂ. ನೀಡಬೇಕಿದೆ. ಶಕ್ತಿ ಯೋಜನೆ ಸಂಬಂಧ ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ₹5,000 ಕೋಟಿ ರೂ.ಗಳಷ್ಟು ಅನುದಾನ ಬಾಕಿ ಉಳಿದಿದೆ. ಈ ಎಲ್ಲಾ ಆರ್ಥಿಕ ಸವಾಲುಗಳನ್ನು ಎದುರಿಸಲು ಟಿಕೆಟ್ ದರ ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ನಿಗಮಗಳು ವಾದಿಸಿವೆ.

ಟಿಕೆಟ್ ದರವನ್ನು ಸಂಪೂರ್ಣವಾಗಿ ಹೆಚ್ಚಿಸುವ ಬದಲು, ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರಿಂದ ಕನಿಷ್ಠ ಅರ್ಧಟಿಕೆಟ್ ದರವನ್ನು ಪಡೆದುಕೊಳ್ಳಲಿ, ಇದರಿಂದ ನಿಗಮಗಳ ಆರ್ಥಿಕ ಹೊರೆಯನ್ನು ಸ್ವಲ್ಪಮಟ್ಟಿಗೆ ಇಳಿಸಬಹುದು ಎಂದು ಸಾರ್ವಜನಿಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *