ಉದಯಕಾಲ ನ್ಯೂಸ್,ಬೆಳಗಾವಿ: ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣಕ್ಕೀಡಾದ ಬೆಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಳುಂಕೆ ಅವರ ಪಾರ್ಥಿವ ಶರೀರವು ಸೋಮವಾರ ಅವರ ಜನ್ಮಭೂಮಿಯಾದ ಚಿಕ್ಕೋಡಿ ತಾಲೂಕಿನ ಅರಟಾಳ ಗ್ರಾಮಕ್ಕೆ ತಲುಪಿದೆ. ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ವೇಳೆ ಸಂಭವಿಸಿದ ಈ ಅನಿರೀಕ್ಷಿತ ದುರಂತದಿಂದಾಗಿ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ನೆರೆದವರ ಕಣ್ಣೀರು ತರಿಸಿದೆ. ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯೊಬ್ಬರನ್ನು ಕಳೆದುಕೊಂಡ ಸ್ನೇಹಿತರು ಮತ್ತು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಅರಟಾಳ ಗ್ರಾಮದಲ್ಲಿ ಅರುಣ್ ಸಾಳುಂಕೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರಾಜಕೀಯ ಮುಖಂಡರು, ಬಾಲ್ಯದ ಸ್ನೇಹಿತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲೇ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ ಕೈಗೊಳ್ಳಲಾಗಿದೆ.
ಮಗನನ್ನು ಕಳೆದುಕೊಂಡ ತಂದೆ ಮನೋಹರ ಸಾಳುಂಕೆ ಅವರು ಬಿಕ್ಕಿ ಬಿಕ್ಕಿ ಅಳುತ್ತಾ, “ದೇವರು ಒಳ್ಳೆಯವರನ್ನು ಕಾಯುತ್ತಾನೆ ಎಂಬ ಲಕ್ಷಣಗಳು ನನಗೆ ಕಾಣುತ್ತಿಲ್ಲ. ಐದು ಜನ ಸ್ನೇಹಿತರು ಅತ್ಯಂತ ಭಕ್ತಿ ಹಾಗೂ ಆತ್ಮೀಯತೆಯಿಂದ ಯಾತ್ರೆಗೆ ತೆರಳಿದ್ದರು. ಆದರೆ, ಆ ದೇವರು ಕೇದಾರನಾಥ ಮತ್ತು ಬದರಿನಾಥದಲ್ಲೇ ನನ್ನ ಮಗನನ್ನು ತನ್ನ ಬಳಿ ಕರೆದುಕೊಂಡು ಬಿಟ್ಟ” ಎಂದು ನೋವು ತೋಡಿಕೊಂಡರು. ಅರುಣ್ ಸಾಮಾನ್ಯ ಸಿಪಾಯಿಯಿಂದ ಹಿಡಿದು ಎಲ್ಲರೊಂದಿಗೂ ಅತ್ಯಂತ ವಿಶ್ವಾಸದಿಂದ ಬೆರೆಯುತ್ತಿದ್ದ ಗುಣವನ್ನು ಅವರು ಈ ವೇಳೆ ಸ್ಮರಿಸಿದರು.
ಗೆಳೆಯನ ನೆನೆದು ಕಣ್ಣೀರಿಟ್ಟ ಕೆಎಎಸ್ ಅಧಿಕಾರಿ
ಅರುಣ್ ಅವರ ಒಡನಾಟ ನೆನೆದು ಕೆಎಎಸ್ ಅಧಿಕಾರಿ ಅಶೋಕ್ ಮಿರ್ಜಿ ಭಾವುಕರಾದರು. ನಾವಿಬ್ಬರೂ ಒಟ್ಟಿಗೆ ಬೆಳಗಾವಿಯಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆವು. ನಾನು ಕಾನ್ಸ್‌ಟೇಬಲ್ ಆಗಿದ್ದಾಗ ಅವರು ಪಿಎಸ್‌ಐ ಆಗಿದ್ದರು. ನೀನು ಕೆಎಎಸ್ ಓದು, ಅಧಿಕಾರಿಯಾಗುತ್ತೀಯಾ ಎಂದು ಸದಾ ಪ್ರೇರೇಪಿಸುತ್ತಿದ್ದವರು ಅರುಣ್. ಓದುವ ಸಮಯದಲ್ಲಿ ಅವರ ಮನೆಯಲ್ಲೇ ಇದ್ದು ತಯಾರಿ ನಡೆಸಿದ್ದೆ. ಅವರ ಬೆಂಬಲದಿಂದಲೇ ನಾನು ಇಂದು ಕೆಎಎಸ್ ಅಧಿಕಾರಿಯಾಗಲು ಸಾಧ್ಯವಾಯಿತು” ಎಂದು ತಮ್ಮ ಆಪ್ತ ಗೆಳೆಯನ ಸಹಾಯವನ್ನು ಕಣ್ಣೀರಿಡುತ್ತಾ ಸ್ಮರಿಸಿದರು. ಕಳೆದ ಎರಡು ತಿಂಗಳ ಹಿಂದಷ್ಟೇ ಫೋನ್‌ನಲ್ಲಿ ಮಾತನಾಡಿದ್ದೆವು, ಆದರೆ ವಿಧಿಯಾಟ ಬೇರೆಯೇ ಇತ್ತು ಎಂದು ಅವರು ಕಂಬನಿ ಮಿಡಿದರು.
#ArunSalunke #CCBInspector #UttarakhandHelicopterCrash #ChikodiNews #UdayakalaNews #AratalVillage #BreakingNews

