ಉದಯಕಾಲ ನ್ಯೂಸ್, ಚೆನ್ನೈ: ದಕ್ಷಿಣ ಭಾರತದ ರಾಜಕಾರಣದಲ್ಲಿ ಮತ್ತೊಮ್ಮೆ ಪ್ರತ್ಯೇಕತೆಯ ಕಿಚ್ಚು ಹತ್ತಿಸುವಂತಹ ಬೆಳವಣಿಗೆಯೊಂದು ನಡೆದಿದ್ದು, ತಮಿಳುನಾಡಿಗೆ ಪ್ರತ್ಯೇಕ ರಾಜ್ಯ ಧ್ವಜವನ್ನು ಪರಿಚಯಿಸಲಾಗುವುದು ಎಂದು ಟಿವಿಕೆ (TVK) ಪಕ್ಷದ ಪ್ರಮುಖರಾದ ಆಧವ್ ಅರ್ಜುನ ನೀಡಿರುವ ಹೇಳಿಕೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಹಲವು ರಾಜ್ಯಗಳು ತಮ್ಮದೇ ಆದ ಸಾಂಸ್ಕೃತಿಕ ಧ್ವಜಗಳನ್ನು ಹೊಂದಿರುವಂತೆ ತಮಿಳುನಾಡಿಗೂ ಪ್ರತ್ಯೇಕ ಧ್ವಜ ಬೇಕು ಎಂಬ ವಾದವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇಂತಹ ಪ್ರಸ್ತಾಪಗಳು ದೇಶದಲ್ಲಿ ಪ್ರತ್ಯೇಕತಾವಾದಿ ಮನಸ್ಥಿತಿಯನ್ನು ಬೆಳೆಸುವ ಅಪಾಯವನ್ನು ತಂದೊಡ್ಡಲಿವೆ ಎಂದು ಎಚ್ಚರಿಕೆ ನೀಡಿರುವ ಕಮಲ ಪಡೆ, ಸರ್ಕಾರದ ಸ್ಪಷ್ಟನೆಯನ್ನು ಆಗ್ರಹಿಸಿದೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಟಿವಿಕೆ ನಾಯಕ ಆಧವ್ ಅರ್ಜುನ, ದೇಶದ ಇತರೆ ಕೆಲವು ರಾಜ್ಯಗಳಂತೆ ತಮಿಳುನಾಡಿಗೆ ಪ್ರತ್ಯೇಕ ಧ್ವಜವಿಲ್ಲದ ಕೊರತೆಯನ್ನು ನೀಗಿಸಲು ನಾವೇ ಪ್ರತ್ಯೇಕ ಧ್ವಜವನ್ನು ಪರಿಚಯಿಸುವುದಾಗಿ ಹೇಳಿದ್ದರು. ಇದರೊಂದಿಗೆ ಶಾಲಾ ಹಂತದಿಂದಲೇ ಮಾತೃಭಾಷೆ ತಮಿಳನ್ನು ಕಡ್ಡಾಯಗೊಳಿಸಬೇಕು ಮತ್ತು ದ್ವಿಭಾಷಾ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಪ್ರತಿಪಾದಿಸಿದ್ದರು. ಚೀನಾ, ಜಪಾನ್ ಮತ್ತು ಫ್ರಾನ್ಸ್ ಮಾದರಿಯಲ್ಲಿ ವ್ಯವಹಾರ ಹಾಗೂ ಶಿಕ್ಷಣದಲ್ಲೂ ತಮಿಳಿಗೆ ಪ್ರಥಮ ಆದ್ಯತೆ ಸಿಗಬೇಕು ಎಂದು ಅವರು ವಾದಿಸಿದ್ದರು.
ಬಿಜೆಪಿಯಿಂದ ತೀವ್ರ ಆಕ್ಷೇಪ
ಸಚಿವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ತೀವ್ರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ವಿನೋಜ್ ಪಿ. ಸೆಲ್ವಂ, ತಮಿಳು ಮತ್ತು ಭಾರತೀಯ ಗುರುತುಗಳನ್ನು ಪರಸ್ಪರ ವಿರುದ್ಧವಾದ ನಿಷ್ಠೆಗಳಂತೆ ಬಿಂಬಿಸುವ ಇಂತಹ ಯೋಚನೆಗಳು ವಿಭಜನೆಗೆ ದಾರಿ ಮಾಡಿಕೊಡಲಿವೆ ಎಂದಿದ್ದಾರೆ. ಭಾರತೀಯ ತ್ರಿವರ್ಣ ಧ್ವಜದ ಅಡಿಯಲ್ಲಿ ತಮಿಳು ಸಂಸ್ಕೃತಿ ಮತ್ತು ಗುರುತಿಗೆ ಯಾವುದೇ ಕೊರತೆಯುಂಟಾಗಿಲ್ಲ. ಧ್ವಜವನ್ನು ವಿನ್ಯಾಸಗೊಳಿಸುವುದು ಸುಲಭ, ಆದರೆ ರಾಜ್ಯದ ಯುವಕರ ಭವಿಷ್ಯವನ್ನು ರೂಪಿಸಲು ನೈಜ ಶ್ರಮದ ಅವಶ್ಯಕತೆಯಿದೆ ಎಂದು ಅವರು ಟೀಕಿಸಿದ್ದಾರೆ.
ಭಾಷಾ ನೀತಿ ಹಾಗೂ ಸಮಾನತೆಯ ಪ್ರಶ್ನೆ
ದೇವಾಲಯಗಳಲ್ಲಿ ತಮಿಳು ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸುವವರು, ಇತರೆ ಧಾರ್ಮಿಕ ಕೇಂದ್ರಗಳಾದ ಚರ್ಚ್ ಮತ್ತು ಮಸೀದಿಗಳಲ್ಲೂ ಅದೇ ನೀತಿಯನ್ನು ಜಾರಿಗೊಳಿಸಲು ಧೈರ್ಯ ತೋರುತ್ತಾರೆಯೇ ಎಂದು ವಿನೋಜ್ ಪಿ. ಸೆಲ್ವಂ ಕಯಾಕಿ ಪ್ರಶ್ನಿಸಿದ್ದಾರೆ. ಕೇವಲ ಸಾಂಕೇತಿಕ ರಾಜಕಾರಣವನ್ನು ಬಿಟ್ಟು, ತಮಿಳು ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ, ಉದ್ಯೋಗಾವಕಾಶಗಳು ಹಾಗೂ ಸಂಶೋಧನೆಗಳಿಗೆ ಸರ್ಕಾರ ಯಾವ ರೀತಿಯ ಕಾಲಮಿತಿಯೊಂದಿಗೆ ಯೋಜನೆಗಳನ್ನು ರೂಪಿಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಮೂಲಕ ತಮಿಳುನಾಡು ರಾಜಕಾರಣದಲ್ಲಿ ಭಾಷೆ ಹಾಗೂ ಧ್ವಜದ ವಿಚಾರ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
#TamilNaduFlag #TVKParty #AadhavArjuna #BJPVsTVK #TamilIdentity #UdayakalaNews #TamilNaduPolitics #BreakingNews


