ಅನಾರೋಗ್ಯದಿಂದ ಬಳಲುತ್ತಿದ್ದ ಸೋದರಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಬರುತ್ತಿದ್ದಾಗ ಬೈಕ್ ಅಪಘಾತದಲ್ಲಿ ಸಹೋದರ ಮೃತಪಟ್ಟ ಸುದ್ದಿ ಕೇಳಿದ ಅಕ್ಕ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಗದಗದ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.
ಹೂವಿನಹಡಗಲಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಮ್ಮ (48) ಮೃತಪಟ್ಟವರು. ಅವರ ತಮ್ಮ ನಿಂಗಪ್ಪ ಜೆಸ್ಕಾಂ ಲೈನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
ವಾರದಿಂದ ಮಲ್ಲಮ್ಮ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೂದಿಹಾಳದಲ್ಲಿ ಬಿಟ್ಟು ಬರುವಾಗ ತಾಲೂಕಿನ ಕಾಗನೂರು ಬಳಿ ಬೈಕ್‌ಗೆ ನಾಯಿ ಅಡ್ಡ ಬಂದು ಅಪಘಾತವಾಗಿ
ಮೃತಪಟ್ಟಿದ್ದಾರೆ. ತಮ್ಮ ಅಫಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಮಲ್ಲಮ್ಮ ಹೃದಯಾಘಾತದಿಂದ ಅಸು ನೀಗಿದ್ದಾರೆ.
ಮಂತ್ರಾಲಯದಲ್ಲಿ ಐವರು ನದಿಪಾಲು
ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದೆ. ಹೈದರಾಬಾದ್ ನಿವಾಸಿ ವಡ್ಲ ಸತೀಶ್ (35), ಪುತ್ರ ಯುವನ್ ಚಂದ್ರ(5), ತ್ರಾಲಯ ನಿವಾಸಿ ರಾಘವೇಂದ್ರ (28), ಕರ್ನೂಲ್ ಜಿಲ್ಲೆಯ ವಡ್ಲ ಧನು (23) ಹಾಗೂ ಅನಂತಪುರದ ಸಂಧ್ಯಾ (22) ನದಿಯಲ್ಲಿ ಮುಳುಗಿ ಮೃತಪಟ್ಟವರು.
ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯ ಸತ್ಯನಾರಾಯಣ ಪೂಜೆಗೆ ಆಗಮಿಸಿದ್ದ ಇವರೆಲ್ಲ ಸಂಜೆ ನದಿಯಲ್ಲಿ ಈಜಲು ತೆರಳಿದ್ದರು. ಬಾಲಕ ಯುವನ್ ಚಂದ್ರ ನೀರಲ್ಲಿ ಮುಳುಗುತ್ತಿದ್ದಾಗ ರಕ್ಷಣೆಗೆಂದು ಉಳಿದವರು ಮುಂದಾಗಿ ನಾಲ್ವರು ಕೊಚ್ಚಿಕೊಂಡು ಹೋಗಿದ್ದಾರೆ. ಅಪರ್ಣಾ ಅದೋನಿ ಪಾರಾಗಿ ದಡ ಸೇರಿದ್ದಾರೆ.


