ಕಲಾವಿದರಿಗೆ ಸಾವಿಲ್ಲ. ಏಕೆಂದರೆ ಇವರ ಮರಣದ ನಂತರವೂ ಅಸಂಖ್ಯಾತ ಕಲಾಭಿಮಾನಿಗಳ ಹೃದಯದಲ್ಲಿ ಸದಾ ಜೀವಿಸುತ್ತಾರೆ. ಆಶಾ ಭೋಸ್ಲೆ ಈ ದಿಶೆಯಲ್ಲಿ ಗಾಯನ ಪ್ರೇಮಿಗಳ ಮನದಿಂದ ಮರೆಯಾಗದ ಗಾನ ಕೋಗಿಲೆ.
ಚಲನಚಿತ್ರ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ – ಭಾರತೀಯ ಸಿನಿಮಾ ಗಾಯನ ಪ್ರಪಂಚದ ಒಂದು ದಂತ ಕತೆ. ಸುಮಾರು ಎಪ್ಪತ್ತೈದು ವರ್ಷಗಳ ಕಾಲ ಹಿಂದಿ, ಮರಾಠಿ, ತೆಲುಗು ಕನ್ನಡವಲ್ಲದೆ ಅನೇಕ ಭಾರತೀಯ ಭಾಷೆಗಳಲ್ಲಿ ಹಾಡುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಮಹಾನ್ ಗಾಯಕಿ.
ತನ್ನ ಹಿರಿಯ ಸಹೋದರಿ ಲತಾ ಮಂಗೇಶ್ಕರ್ ದೇಶದ ಮಹಾನ್ ಗಾಯಕಿಯಾಗಿ ಮುಂಚೂಣಿಯಲ್ಲಿದ್ದರೂ, ಇವರ ನೆರವು ಮತ್ತು ಸಹಾಯವನ್ನು ಪಡೆಯದೆ ಅಕ್ಕನ ಜೊತೆಯೇ ಪೈಪೋಟಿ ಮಾಡುವ ರೀತಿಯಲ್ಲಿ ಉದ್ಯಮದಲ್ಲಿ ಬೆಳೆದರು. ಸುದೀರ್ಘ ಕಾಲದವರೆಗೆ ಕ್ಷೇತ್ರವೊಂದರಲ್ಲಿ ತಮ್ಮ ವೃತ್ತಿ ಬದುಕನ್ನು ಸಾಗಿಸುವುದು ಅಷ್ಟು ಸುಲಭವಲ್ಲ ಇದು ಕೇವಲ ಕೆಲವೇ ಮಂದಿ ಸಾಧಕರಿಗೆ ಸಾಧ್ಯ. ಇಂತಹ ಪಯಣದ ಉದ್ದಕ್ಕೂ ಹಲವು ಹತ್ತು ಸವಾಲುಗಳು ಎದುರಾಗುತ್ತವೆ . ಇವುಗಳನ್ನು ಎದರಿಸಿದಾಗಲೇ ಪರಿಪೂರ್ಣ ಬದುಕು ಸಾಧ್ಯ . ಇದುವೇ ಸಾರ್ಥಕ ಜೀವನ. ಇಂತಹ ಸಾರ್ಥಕ ಜೀವನವನ್ನು ಮುಗಿಸಿ ಬಾರದ ಲೋಕಕ್ಕೆ ತೆರಳಿದ ಆಶಾ ಈ ಲೋಕಕ್ಕೆ ನೆನಪು ಮಾತ್ರ.
ಅರವತ್ತು, ಎಪ್ಪತ್ತು ಮತ್ತು ಎಂಭತ್ತರ ದಶಕವಲ್ಲದೆ ತೊಂಭತ್ತರ ದಶಕದಲ್ಲಿ ತಮ್ಮ ಮಧುರ, ಮೋಹಕ ಮತ್ತು ಮಾದಕ ಕಂಠದಲ್ಲಿ ಹಿಂದಿ ಸಿನಿಮಾಲೋಕದ ಗಾಯನ ಪ್ರಪಂಚದಲ್ಲಿ ಇವರು ಮೋಡಿ ಮಾಡಿದ್ದರು. ಭಾರತೀಯ ಚಲನಚಿತ್ರ ರಂಗಕ್ಕೂ ಗಾಯನ ಪ್ರಪಂಚಕ್ಕೆ ಅವಿನಾ ಸಂಬಂಧವಿದೆ. ಒಂದನ್ನು ಬಿಟ್ಟು ಮತ್ತೊಂದು ಇಲ್ಲ. ಒಂದು ಕಡೆ ನರ್ಗೀಸ್, ವಹೀದಾ ರೆಹಮಾನ್, ವೈಜಯಂತಿಮಾಲ ಮುಮ್ತಾಜ್, ಶರ್ಮಿಳಾ ಠಾಕೂರ್ ಅವರ ಚಿತ್ರಣಗಳು ರಜತ ಪರದೆಯ ಮೇಲೆ ಮೂಡಿದಾಗ ಈ ಮಹಾ ನಾಯಕರಿಗೆ ಕಂಠದಾನ ಮಾಡುವ ಮೂಲಕ ಗಾಯನಕ್ಕೆ ಜೀವ ತುಂಬಿದವರು ಲತಾ ಮತ್ತು ಆಶಾ. ಅದರಲ್ಲಿಯೂ ಮುಖ್ಯವಾಗಿ ಅರವತ್ತು ಮತ್ತು ಎಪ್ಪತ್ತರ ದಶಕದ ಸಿನಿಮಾ ಪ್ರಪಂಚದಲ್ಲಿ ಆಶಾ ಮಾಡಿದ ಗಾಯನದ ಮೋಡಿ ವರ್ಣಿಸಲು ಅಸಾಧ್ಯ.
ಕೆಲವೊಂದು ಸಿನಿಮಾಗಳು ಹಾಡುಗಳ ಮೂಲಕವೇ ಸೂಪರ್ ಹಿಟ್ ಆಗಿವೆ. ಎಪ್ಪತ್ತರ ದಶಕದಲ್ಲಂತೂ ಇಂತಹ ಹಾಡುಗಳ ಪೈಪೋಟಿ ಇರುವಂತಹ ಹಲವಾರು ಚಿತ್ರಗಳು ತೆರೆಕಂಡವು. ಯಾದೋಂಕಿ ಭಾರಾತ್, ಬಾರೂದ್, ಆಪ್ ಕೀ ಕಸಮ್, ಅಂದಾಜ್ ಮೊದಲಾದ ಚಿತ್ರಗಳಿಗೆ ಆಶಾ ಮತ್ತು ಲತಾ ಕಂಠಸಿರಿಯೇ ಬಂಡವಾಳ.
ಘಟಾನುಘಟಿ ಸಂಗೀತ ನಿರ್ದೇಶಕರಾಗಿದ್ದ ಆರ್ ಡಿ ಬರ್ಮನ್, ಶಂಕರ್ ಜೈ ಕಿಷನ್, ಕಲ್ಯಾಣ್ ಜೀ ಆನಂದ್ ಜೀ. ಲಕ್ಷ್ಮಿಕಾಂತ್ ಪ್ಯಾರೇಲಾಲ್, ಓ ಪಿ ನಯ್ಯರ್ ಮೊದಲಾದ ದಿಗ್ಗಜರ ಸಂಗೀತ ನಿರ್ದೇಶನದಲ್ಲಿ ಇವರು ಹಾಡಿದ ನೂರಾರು ಹಾಡುಗಳು ಸದಾ ಗಾಯನಪ್ರೇಮಿಗಳ ಮನಸಿನಲ್ಲಿ ಗುಯ್‌ಗುಡುವುದು ಸಹಜ. ಕಲಾವಿದರಿಗೆ ಸಾವಿಲ್ಲ. ಏಕೆಂದರೆ ಅವರ ಮರಣದ ನಂತರವೂ ಅಸಂಖ್ಯಾತ ಕಲಾಭಿಮಾನಿಗಳ ಹೃದಯದಲ್ಲಿ ಓರ್ವ ನಟ ಅಥವಾ ಗಾಯಕ, ಗಾಯಕಿ ಸದಾ ಜೀವಿಸುತ್ತಾರೆ. ಆಶಾ ಭೋಸ್ಲೆ ಈ ದಿಶೆಯಲ್ಲಿ ಗಾಯನ ಪ್ರೇಮಿಗಳ ಲೋಕದ ಮರೆಯಾಗದ ಗಾನಕೋಗಿಲೆ.


