Menu

ನಡುರಾತ್ರಿ ಆಸ್ಪತ್ರೆಗೆ ಆರೋಗ್ಯ ಸಚಿವ ಭೇಟಿ: ಹೊರಗಡೆ ಔಷಧಿ ಬರೆದ ಸಿಬ್ಬಂದಿಗೆ ತರಾಟೆ!

ರಾಮನಗರ: ಖಾಸಗಿ ಕಾರ್ಯಕ್ರಮ ನಿಮಿತ್ತ ತಡರಾತ್ರಿ ಚನ್ನಪಟ್ಟಣಕ್ಕೆ ಆಗಮಿಸಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್‌, ನಡುರಾತ್ರಿ 2 ಗಂಟೆ ಸುಮಾರಿಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಆಶ್ಚರ್ಯ ಮೂಡಿಸಿದರು. ಅಲ್ಲದೆ, ಆಸ್ಪತ್ರೆಯ ಕಾರ್ಯವೈಖರಿ ಹಾಗೂ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ವಿವಿಧ ವಾರ್ಡ್‌ಗಳ ಪರಿಶೀಲನೆ
ಮಧ್ಯರಾತ್ರಿಯ ವೇಳೆ ಆಸ್ಪತ್ರೆಗೆ ಎಂಟ್ರಿ ಕೊಟ್ಟ ಸಚಿವರು, ಆಸ್ಪತ್ರೆಯ ಜನರಲ್ ವಾರ್ಡ್, ಐಸಿಯು (ICU) ಹಾಗೂ ಶೌಚಾಲಯಗಳನ್ನು ವೀಕ್ಷಿಸಿ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದರು. ಇದೇ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಹಾಜರಾತಿಯನ್ನು ಪರಿಶೀಲಿಸಿ, ರಾತ್ರಿ ವೇಳೆಯಲ್ಲಿ ದಾಖಲಾಗಿರುವ ರೋಗಿಗಳ ಸ್ಥಿತಿಗತಿ ಹಾಗೂ ಚಿಕಿತ್ಸೆಯ ಕುರಿತು ವೈದ್ಯರಿಂದ ವಿವರವಾದ ಮಾಹಿತಿ ಸಂಗ್ರಹಿಸಿದರು.

ಖಾಸಗಿ ಮೆಡಿಕಲ್ಸ್‌ ಓಲೈಕೆಗೆ ಗರಂ
ಪರಿಶೀಲನೆ ವೇಳೆ, ಆಸ್ಪತ್ರೆಯಲ್ಲಿಯೇ ಉಚಿತವಾಗಿ ಲಭ್ಯವಿರುವ ಔಷಧಿಗಳನ್ನು ರೋಗಿಗಳಿಗೆ ನೀಡುವ ಬದಲು ಹೊರಗಿನ ಮೆಡಿಕಲ್‌ಗಳಿಗೆ ಚೀಟಿ ಬರೆದುಕೊಡುತ್ತಿರುವ ವಿಚಾರ ಸಚಿವರ ಗಮನಕ್ಕೆ ಬಂದಿದೆ. ಇದರಿಂದ ತೀವ್ರವಾಗಿ ಅಸಮಾಧಾನಗೊಂಡ ಸಚಿವ ಯು.ಟಿ. ಖಾದರ್, ಆಸ್ಪತ್ರೆಯಲ್ಲಿ ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಹೊರಗಡೆ ಯಾಕೆ ಔಷಧಿ ಬರೆದುಕೊಡುತ್ತೀರಿ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಬಡ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲಾ ರೀತಿಯ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿಗಳು ಇಲ್ಲಿಯೇ ಸಿಗುವಂತೆ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಹಾಗೂ ಸಿಬ್ಬಂದಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
#UTKhader #ChannapatnaHospital #Ramanagara #HealthMinister #KarnatakaNews #UdayakalaNews #GovernmentHospital #MedicalCheckup

Related Posts

Leave a Reply

Your email address will not be published. Required fields are marked *