ಉದಯಕಾಲ ನ್ಯೂಸ್, ರಾಮನಗರ: “ಇದು ನನ್ನ ಮನೆ. ನನ್ನ ಮನೆಗೆ ನಾನು ಯಾವಾಗ ಬೇಕಾದರೂ ಬರುತ್ತೇನೆ. ಈ ಜಿಲ್ಲೆ ನನ್ನ ಜನ್ಮಭೂಮಿ, ಇಲ್ಲಿನ ಜನ ನನ್ನವರು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವುಕವಾಗಿ ನುಡಿದರು. ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಹಾಗೂ ನಗರಸಭೆ ನೂತನ ಸಭಾಂಗಣ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಎಂ ಆದ ಬಳಿಕ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರಕ್ಕೆ ಅಧಿಕೃತವಾಗಿ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಜೂನಿಯರ್ ಕಾಲೇಜು ರಸ್ತೆಯಿಂದ ನಗರಸಭೆವರೆಗಿನ ರಸ್ತೆಗಳು ದೊಡ್ಡ ಕಟೌಟ್ಗಳು ಹಾಗೂ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಕಾರ್ಯಕ್ರಮಕ್ಕೂ ಮುನ್ನ ಅರ್ಚಕರಹಳ್ಳಿ ಬಳಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕಟ್ಟಡವನ್ನು ವೀಕ್ಷಿಸಿದ ಸಿಎಂ, ನಂತರ ನೇರವಾಗಿ ನಗರಸಭೆಗೆ ಆಗಮಿಸಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದರು. ಇದರೊಂದಿಗೆ ಕ್ಲಾಕ್ ಟವರ್, ಫುಡ್ ಸ್ಟ್ರೀಟ್, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಜಗಜ್ಯೋತಿ ಬಸವೇಶ್ವರ ಪುತ್ಥಳಿಗಳನ್ನು ಲೋಕಾರ್ಪಣೆಗೊಳಿಸಿದರು.

ರೈತರ ಪರ ನಿರ್ಧಾರ, ಬೆಲೆಯೇರಿಕೆಗೆ ಸಮರ್ಥನೆ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಸರಕಾರ ಜಾರಿಗೆ ತಂದಿರುವ ಹಾಲಿನ ದರ ಹಾಗೂ ಇತರೆ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಬಿಜೆಪಿ ರೈತ ವಿರೋಧಿ ಪಕ್ಷ. ನಾವು ರೈತರಿಗೆ ಅನುಕೂಲವಾಗಲೆಂದೇ ಹಾಲಿನ ಬೆಲೆ ಹೆಚ್ಚಳ ಮಾಡಿದ್ದೇವೆ, ಆದರೆ ಅದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಇಳಿಸಿದರೆ, ನಾವು ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡುತ್ತೇವೆ ಎಂದು ಸವಾಲು ಹಾಕಿದರು. ಕಬ್ಬು ಬೆಳೆಗಾರರ ರಕ್ಷಣೆಗಾಗಿ ಈಗಾಗಲೇ ಕಾರ್ಖಾನೆಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಮಹಿಳೆಯರಿಗೆ ಗೃಹಲಕ್ಷ್ಮಿ ಬಲ – ಕಾಮಗಾರಿಗಳ ಮಹಾಪೂರ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ‘ಗೃಹಲಕ್ಷ್ಮಿ’ ಯೋಜನೆಯಡಿ 7,400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು. ರಾಮನಗರಕ್ಕೆ ನಾನು ಪ್ರವಾಸ ಮಾಡಲು ಬಂದಿಲ್ಲ. ಇದು ನನ್ನೂರು, ನನ್ನ ಮನೆ. ಇಲ್ಲಿನ ಶಾಸಕರು ಮತ್ತು ಸಚಿವರನ್ನು ಪ್ರತ್ಯೇಕವಾಗಿ ಕರೆದು ಎಲ್ಲ ಕ್ಷೇತ್ರಗಳ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ. ಕನಕಪುರ ಮತ್ತು ರಾಮನಗರದಲ್ಲಿ ಆಸ್ಪತ್ರೆಗಳ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ನೀರಾವರಿ ಕ್ಷೇತ್ರಕ್ಕೆ ಈಗಾಗಲೇ 1,000 ಕೋಟಿ ರೂ.ಗಳಿಗೂ ಅಧಿಕ ಅನುದಾನ ನೀಡಲಾಗಿದೆ. ಹಂತ ಹಂತವಾಗಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು” ಎಂದರು.
ರಾಮನಗರದಲ್ಲಿ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಕುರಿತು ಮಾತನಾಡಿದ ಅವರು, ಚಾಮುಂಡೇಶ್ವರಿ ಮೆಡಿಕಲ್ ಕಾಲೇಜಿಗೆ ಅನುಮತಿ ನೀಡಲಾಗಿದೆ. ಚನ್ನಪಟ್ಟಣದಲ್ಲಿ ದಯಾನಂದ ಸಾಗರ ಸಂಸ್ಥೆಯಿಂದ ಕಾಮಗಾರಿ ನಡೆಯುತ್ತಿದ್ದು, ರಾಮನಗರ ಹಾಗೂ ಕನಕಪುರದಲ್ಲೂ ವೈದ್ಯಕೀಯ ಕಾಲೇಜು ನಿರ್ಮಾಣ ಕಾರ್ಯ ಮುಂದುವರಿದಿದೆ. ಒಟ್ಟಾರೆ ನಾಲ್ಕು ಕಡೆಗಳಲ್ಲಿ ಈ ಕಾರ್ಯಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿವೆ” ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಸಚಿವ ಎಚ್.ಸಿ. ಬಾಲಕೃಷ್ಣ, ಶಾಸಕರಾದ ಸಿ.ಪಿ. ಯೋಗೇಶ್ವರ್, ವಿಧಾನಪರಿಷತ್ ಸದಸ್ಯ ಎಸ್. ರವಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಶಾಸಕ ಸಿಎಂ ಲಿಂಗಪ್ಪ ಹಾಗೂ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಉಪಸ್ಥಿತರಿದ್ದರು.
#CMDKShivakumar #RamanagaraNews #KarnatakaCM #KempegowdaStatue #UdayakalaNews #KarnatakaPolitics

