Saturday, November 14, 2026
Menu

ಅಮ್ಮನ ಅಂತಿಮ ದರ್ಶನದಲ್ಲಿ ಕಣ್ಣೀರ ಕೋಡಿ ಹರಿಸಿದ ಪಾತಕಿ ರವಿ ಪೂಜಾರಿ!

ಉದಯಕಾಲ ನ್ಯೂಸ್, ಮಲ್ಪೆ,(ಉಡುಪಿ): ಉಡುಪಿ ಮೂಲದ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಅವರ ತಾಯಿ ನಿಧನರಾಗಿದ್ದು,ಹೈಕೋರ್ಟ್ ಅನುಮತಿಯ ಮೇರೆಗೆ ಅಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಉಡುಪಿಗೆ ಕರೆತರಲಾಯಿತು. ಮಲ್ಪೆ ಸಮೀಪದ ನೆರ್ಗಿಯಲ್ಲಿರುವ ಸ್ವಗೃಹದಲ್ಲಿ ನಡೆದ ತಾಯಿಯ ಅಂತಿಮ ವಿಧಿವಿಧಾನಗಳಲ್ಲಿ ರವಿ ಪೂಜಾರಿ ಭಾಗಿಯಾಗಿದ್ದು, ತಾಯಿಯ ಮೃತದೇಹದ ಮುಂದೆ ಕಣ್ಣೀರಿಟ್ಟು ಬಿಕ್ಕಿ ಬಿಕ್ಕಿ ಅತ್ತಿರುವ ಘಟನೆ ನಡೆದಿದೆ.

ತಾಯಿ ಮೃತದೇಹ ಕಂಡು ಕುಸಿದುಬಿದ್ದ ಪಾತಕಿ

ಉಡುಪಿ ಮೂಲದ ಭೂಗತ ಪಾತಕಿ ರವಿ ಪೂಜಾರಿಯ ತಾಯಿ ಸುಶೀಲಾ ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನರಾಗಿದ್ದರು. ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ರವಿ ಪೂಜಾರಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತ್ತು. ಅದರಂತೆ, ಬೆಂಗಳೂರು ಕಾರಾಗೃಹ ಇಲಾಖೆಯ ಪೊಲೀಸರ ಸರ್ಪಗಾವಲಿನಲ್ಲಿ ರವಿ ಪೂಜಾರಿಯನ್ನು ಉಡುಪಿಗೆ ಕರೆತರಲಾಯಿತು. ಮಲ್ಪೆ ಸಮೀಪದ ನೆರ್ಗಿಯ ಹಿರಿಯರ ಮನೆಗೆ ಆಗಮಿಸುತ್ತಿದ್ದಂತೆ, ತಾಯಿಯ ಅಂತಿಮ ದರ್ಶನ ಪಡೆದ ರವಿ ಪೂಜಾರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಬಿಕ್ಕಿ ಬಿಕ್ಕಿ ಅತ್ತು ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿ ಉಡುಪಿ ಎಸ್ಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಮತ್ತು ಹೆಚ್ಚುವರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನ್ಯಾಯಾಲಯದ ಆದೇಶದಂತೆ, ಪೊಲೀಸ್ ಎಸ್ಕಾರ್ಟ್ ಹಾಗೂ ಭದ್ರತೆಯ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಲಿದ್ದು, ಅಂತ್ಯಕ್ರಿಯೆ ಮುಗಿದ ತಕ್ಷಣವೇ ಆತನನ್ನು ವಾಪಸ್ ಜೈಲಿಗೆ ಕರೆದೊಯ್ಯಲಾಯಿತು.

26 ವರ್ಷಗಳ ಮುಸುಕಿನ ಜೀವನ ಹಾಗೂ ಸೆನೆಗಲಿನಲ್ಲಿ ಬಂಧನ

ರವಿ ಪೂಜಾರಿ 1980ರ ದಶಕದಲ್ಲಿ ತನ್ನ ಕ್ರಿಮಿನಲ್ ದಂಧೆಯನ್ನು ಆರಂಭಿಸಿದ್ದು, ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್ ಸಹಚರನಾಗಿ ಗುರುತಿಸಿಕೊಂಡಿದ್ದನು. ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೊಲೆ, ಕೊಲೆ ಯತ್ನ, ಜೀವಬೆದರಿಕೆ ಹಾಗೂ ಹಪ್ತಾ ವಸೂಲಿಯಂತಹ 90ಕ್ಕೂ ಅಧಿಕ ಗಂಭೀರ ಅಪರಾಧ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದನು. ಸುಮಾರು 26 ವರ್ಷಗಳ ಕಾಲ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಆತ, ಆಂಥೋನಿ ಫೆರ್ನಾಂಡಿಸ್ ಎಂಬ ನಕಲಿ ಹೆಸರಿನಲ್ಲಿ ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಕುಟುಂಬದೊಂದಿಗೆ ವಾಸವಿದ್ದನು. ಅಲ್ಲದೆ, ಅಲ್ಲಿ ಒಂಬತ್ತು ಮಳಿಗೆಗಳನ್ನು ಹೊಂದಿರುವ ‘ನಮಸ್ತೆ ಇಂಡಿಯಾ’ ಎಂಬ ರೆಸ್ಟೋರೆಂಟ್ ನಡೆಸುತ್ತಾ ಸ್ಥಳೀಯವಾಗಿ ಜನಪ್ರಿಯನಾಗಿದ್ದನು. ಅಂತಿಮವಾಗಿ 2019ರ ಜನವರಿ 19ರಂದು ಸೆನೆಗಲ್‌ನ ಡಾಕರ್‌ನಲ್ಲಿ ಕ್ಷೌರಿಕನ ಅಂಗಡಿಯೊಂದರಲ್ಲಿ ಕೂತಿದ್ದಾಗ ಕರ್ನಾಟಕ ಪೊಲೀಸರು ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳ ಕಾರ್ಯಾಚರಣೆಯಲ್ಲಿ ಆತ ಸೆರೆಸಿಕ್ಕಿದ್ದನು. ಬಂಧನದ ಬಳಿಕ ಭಾರತಕ್ಕೆ ಕರೆತರಲ್ಪಟ್ಟ ಆತ ಕಳೆದ 6 ವರ್ಷಗಳಿಂದ ಬೆಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಕಾಲ ಕಳೆಯುತ್ತಿದ್ದಾನೆ. ತಾಯಿಯ ಸಾವಿನ ಹಿನ್ನೆಲೆಯಲ್ಲಿ ಕಾನೂನು ಭದ್ರತೆಯೊಂದಿಗೆ ಆತನಿಗೆ ಒದಗಿಸಲಾದ ಈ ಭೇಟಿಯು ಈಗ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
#RaviPoojaari #UdupiNews #UnderworldDon #Malpe #KarnatakaPolice #Udayakala #CrimeNews #BailPermit

Related Posts

Leave a Reply

Your email address will not be published. Required fields are marked *