ಉದಯಕಾಲ ನ್ಯೂಸ್, ಬೆಂಗಳೂರು: ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಮತ್ತು ವರದಿಗಳು ಕೇಳಿಬಂದ ಹಿನ್ನೆಲೆಯಲ್ಲಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು, ಮಧ್ಯಮ ವರ್ಗದ ಜನರ ನೆರವಿಗಾಗಿ ಮಹತ್ವದ ಕ್ರಮಗಳಿಗೆ ಮುಂದಾಗಿದೆ. ಎಥೆನಾಲ್ ಪ್ರಮಾಣದ ಪ್ರದರ್ಶನ ಫಲಕಗಳನ್ನು ಅಳವಡಿಸುವ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆದಿದ್ದು, ಪೆಟ್ರೋಲ್ ಬಂಕ್‌ಗಳ ಕಾರ್ಯವೈಖರಿಯಲ್ಲಿ ಮಾರ್ಪಾಡು ಮಾಡಲು ಮುಂದಾಗಿದೆ.
ಬಂಕ್‌ಗಳಲ್ಲಿ ಎಥೆನಾಲ್ ಪ್ರಮಾಣ ಕಡ್ಡಾಯ ಪ್ರದರ್ಶನ
ಗ್ರಾಹಕರು ತಾವು ಖರೀದಿಸುವ ಇಂಧನದಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳುವ ಸಲುವಾಗಿ, ರಾಜ್ಯದ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಸಾಮಾನ್ಯವಾಗಿ ವಾಹನ ಸವಾರರಿಗೆ ತಾವೆಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಹಾಕಿಸುತ್ತಿದ್ದೇವೆ ಎಂಬ ಸ್ಪಷ್ಟ ಮಾಹಿತಿ ಇರುವುದಿಲ್ಲ.ಕೆಲವೊಂದು ಬಂಕ್‌ಗಳು ಮಾಡುವ ಪ್ರಮಾದದಿಂದ ಗ್ರಾಹಕರ ವಾಹನಗಳು ಹಾಳಾಗುತ್ತಿವೆ. ಹಾಗಾಗಿ, ಡಿಜಿಟಲ್ ಫಲಕಗಳ ಮೂಲಕ ಪೆಟ್ರೋಲ್‌ನಲ್ಲಿರುವ ಎಥೆನಾಲ್ ಶೇಕಡಾವಾರು ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. ಇದರೊಂದಿಗೆ, ಬಂಕ್‌ಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗೆಗಿನ ಮಾಹಿತಿಯನ್ನೂ ಸಹ ಈ ಡಿಜಿಟಲ್ ಡಿಸ್‌ಪ್ಲೇಗಳಲ್ಲಿ ಪ್ರದರ್ಶಿಸಲು ಸೂಚನೆ ನೀಡುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರದ ಗಮನಕ್ಕೆ ಮತ್ತು ಲ್ಯಾಬ್ ಪರೀಕ್ಷಾ ವರದಿಗೆ ಪ್ಲ್ಯಾನ್
ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವಾಗುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಮತ್ತು ತಜ್ಞರ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯ ಸರ್ಕಾರ ಅಧಿಕೃತವಾಗಿ ಪತ್ರ ಬರೆಯಲು ನಿರ್ಧರಿಸಿದೆ.
ಒಂದು ವೇಳೆ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವುದೇ ಸ್ಪಷ್ಟ ನಿಲುವು ಪ್ರಕಟಿಸದಿದ್ದರೆ ಅಥವಾ ಸ್ಪಷ್ಟನೆ ನೀಡದಿದ್ದರೆ, ರಾಜ್ಯ ಸರ್ಕಾರವೇ ಸ್ವಯಂಪ್ರೇರಿತವಾಗಿ ಮತ್ತೊಮ್ಮೆ ಪ್ರಯೋಗಾಲಯಗಳಲ್ಲಿ ಪೆಟ್ರೋಲ್ ಮಾದರಿಗಳನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲು ಮುಂದಾಗಲಿದೆ. ಅಲ್ಲದೆ, ಆ ಪ್ರಯೋಗಾಲಯಗಳ ಪರೀಕ್ಷಾ ವರದಿಗಳನ್ನು ನೇರವಾಗಿ ಸಾರ್ವಜನಿಕರ ಮುಂದಿಡುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ದೂರುಗಳಿಗೆ ಪ್ರತ್ಯೇಕ ಆನ್‌ಲೈನ್ ಪೋರ್ಟಲ್
ಎಥೆನಾಲ್ ಮಿಶ್ರಣದ ಪ್ರಮಾಣದಲ್ಲಿ ವ್ಯತ್ಯಾಸವಿರುವುದು ಅಥವಾ ಪೆಟ್ರೋಲ್ ಬಂಕ್‌ಗಳಲ್ಲಿ ಎದುರಾಗುವ ಇಂಧನ ಗುಣಮಟ್ಟದ ಸಮಸ್ಯೆಗಳು ಹಾಗೂ ಇಂಧನ ಕೊರತೆಯಂತಹ ಸಮಸ್ಯೆಗಳ ಕುರಿತು ಗ್ರಾಹಕರು ಸುಲಭವಾಗಿ ದೂರು ದಾಖಲಿಸಲು ಅನುಕೂಲವಾಗುವಂತೆ ವಿಶೇಷವಾದ ಆನ್‌ಲೈನ್ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪೋರ್ಟಲ್ ಮೂಲಕ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಸಲ್ಲಿಸಬಹುದಾಗಿದ್ದು, ತಕ್ಷಣವೇ ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಇದು ಸಹಕಾರಿಯಾಗಲಿದೆ.
#EthanolBlending #KarnatakaNews #PetrolBunk #RizwanArshad #UdayakalaNews #FuelQuality #GovernmentUpdates


