ಪಟ್ಟನಂತಿಟ್ಟ (ಕೇರಳ): ಕೇರಳದ ವಿಶ್ವಪ್ರಸಿದ್ಧ ದಕ್ಷಿಣ ಭಾರತದ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಂಡಲ ಪೂಜೆ ಹಾಗೂ ತೀರ್ಥಯಾತ್ರೆಗೆ (Sabarimala Pilgrimage) ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಸೋಮವಾರ ಸಂಜೆ 5 ಗಂಟೆಗೆ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಮಲಯಾಳಂ ಮಾಸದ ‘ವೃಶ್ಚಿಕಂ’ ಮೊದಲ ದಿನವಾದ ನಾಳೆ (ಮಂಗಳವಾರ) ಅಧಿಕೃತವಾಗಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯ ಯಾತ್ರಾರ್ಥಿಗಳಿಗೆ ಸರ್ಕಾರ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿಯು ಹಲವು ವಿಶೇಷ ಹಾಗೂ ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಿದೆ. ವಿಶೇಷವಾಗಿ ವಿಮಾನ ಮೂಲಕ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನೆಡುಂಬಸ್ಸೆರಿಯಿಂದ ನಿಲಕ್ಕಲ್ಗೆ ಹೆಲಿಕಾಪ್ಟರ್ ಸೇವೆ ಹಾಗೂ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ‘ಟ್ರಾನ್ಸಿಟ್ ಲೌಂಜ್’ ಅನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ.
ನೆಡುಂಬಸ್ಸೆರಿಯಿಂದ ನಿಲಕ್ಕಲ್ಗೆ ಹೆಲಿಕಾಪ್ಟರ್ ಸೇವೆ: ಮಂಗಳವಾರದಿಂದ ಟಿಕೆಟ್ ಬುಕಿಂಗ್ ಶುರು
ಶಬರಿಮಲೆಗೆ ಆಗಮಿಸುವ ಅಯ್ಯಪ್ಪ ಭಕ್ತರ ಸುಲಭ ಹಾಗೂ ಶ್ರಮರಹಿತ ಪ್ರಯಾಣಕ್ಕಾಗಿ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (CIAL) ನಿಲಕ್ಕಲ್ಗೆ ಹೆಲಿಕಾಪ್ಟರ್ ಸೇವೆಯನ್ನು ಪ್ರಥಮ ಬಾರಿಗೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಮಂಗಳವಾರದಿಂದಲೇ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಸಿಐಎಎಲ್ನಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಬುಕಿಂಗ್ ಕೇಂದ್ರವನ್ನು ತೆರೆಯಲಾಗುತ್ತಿದ್ದು, ವಿಮಾನದ ಮೂಲಕ ಕೊಚ್ಚಿಗೆ ಆಗಮಿಸುವ ಯಾತ್ರಿಕರಿಗೆ ಮತ್ತು ವಿಶೇಷ ಪರಿಗಣನೆ ಅಗತ್ಯವಿರುವವರಿಗೆ ಈ ಸೇವೆಯಲ್ಲಿ ಆದ್ಯತೆ ಸಿಗುವ ಸಾಧ್ಯತೆಯಿದೆ. ಪ್ರಯಾಣ ದರ ಹಾಗೂ ಅರ್ಹತಾ ಮಾನದಂಡಗಳ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟವಾಗಲಿದೆ.
ಇದರೊಂದಿಗೆ, ವಿಮಾನದ ಮೂಲಕ ಆಗಮಿಸುವ ಭಕ್ತರಿಗಾಗಿ CIAL ಆವರಣದಲ್ಲಿ 5,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ‘ಟ್ರಾನ್ಸಿಟ್ ಲೌಂಜ್’ (ಪ್ರಯಾಣಿಕರ ತಂಗುದಾಣ) ಅನ್ನು ಕೇರಳದ ಪ್ರಮುಖ ಗಣ್ಯರು ಉದ್ಘಾಟಿಸಲಿದ್ದಾರೆ. ಯಾತ್ರೆಯ ಅವಧಿಯಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ಈ ಕೇಂದ್ರದಲ್ಲಿ ವಿಶ್ರಾಂತಿ ಕೊಠಡಿಗಳು, ಶುದ್ಧ ಸಸ್ಯಾಹಾರಿ ಉಪಹಾರ ಗೃಹ, ವಾಪಸಾಗುವ ಭಕ್ತರಿಗೆ ವಿಮಾನಗಳ ವೇಳಾಪಟ್ಟಿಯನ್ನು ನೈಜ ಸಮಯದಲ್ಲಿ ತಿಳಿಯಲು ‘ಫ್ಲೈಟ್ ಇನ್ಫಾರ್ಮೇಷನ್ ಡಿಸ್ಪ್ಲೇ ಸಿಸ್ಟಮ್’ ಹಾಗೂ ಕೆಎಸ್ಆರ್ಟಿಸಿ ವಿಶೇಷ ಬಸ್ ಸೇವಾ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮುಂಗಡ ಟ್ಯಾಕ್ಸಿ ಸೇವೆ, ದೇವಸ್ವಂ ಸಹಾಯ ಕೇಂದ್ರ ಮತ್ತು ಪ್ರಸಾದ ಕೂಪನ್ ಕೌಂಟರ್ಗಳು ಇಲ್ಲಿ ಲಭ್ಯವಿರಲಿವೆ.
ಭಕ್ತರಿಗೆ ಹೈಟೆಕ್ ವ್ಯವಸ್ಥೆಗಳು: ಉಚಿತ ಶೌಚಾಲಯ ಹಾಗೂ ವಿಮಾ ರಕ್ಷಣೆ
ಈ ಬಾರಿಯ ಮಂಡಲ-ಮಕರವಿಳಕ್ಕು ಯಾತ್ರೆಯಲ್ಲಿ ಭಕ್ತರ ನೂಕುನುಗ್ಗಲು ನಿಯಂತ್ರಿಸಲು ಮತ್ತು ಸುರಕ್ಷತೆಗಾಗಿ ಹಲವು ಪ್ರಮುಖ ಸುಧಾರಣೆಗಳನ್ನು ಮಾಡಲಾಗಿದೆ. ನಾಳೆ ಒಂದೇ ದಿನ ಸುಮಾರು 70,000ಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯುವ ನಿರೀಕ್ಷೆಯಿದೆ. ಯಾತ್ರಾರ್ಥಿಗಳು ಕಡ್ಡಾಯವಾಗಿ ವಿಮಾ ರಕ್ಷಣೆ ಪಡೆಯಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಪಲ್ಲಕ್ಕಿ ಸೇವೆಯನ್ನು ಪ್ರಿಪೇಯ್ಡ್ ವ್ಯವಸ್ಥೆಗೆ ಬದಲಾಯಿಸಲಾಗಿದ್ದು, ಪೊಲೀಸರು ಸುಧಾರಿತ ಎಐ (AI) ಆಧಾರಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.
ಭಕ್ತರ ಅನುಕೂಲಕ್ಕಾಗಿ ಪ್ರಸಾದ ವಿತರಣೆಗೆ 22 ಕೌಂಟರ್ಗಳನ್ನು ತೆರೆಯಲಾಗಿದ್ದು, ಸೌತ್ ಇಂಡಿಯನ್ ಬ್ಯಾಂಕ್ ಒದಗಿಸಿರುವ ಐದು ವೆಂಡಿಂಗ್ ಯಂತ್ರಗಳನ್ನು ಅಳವಡಿಸಲಾಗಿದೆ. ಅರವಣ ಪ್ರಸಾದದ ಕೊರತೆ ನೀಗಿಸಲು ವೃಶ್ಚಿಕ ಮಾಸದ ಮೊದಲ ದಿನದ ವೇಳೆಗೆ 50 ಲಕ್ಷ ಟಿನ್ಗಳಷ್ಟು ಹೆಚ್ಚುವರಿ ದಾಸ್ತಾನು ಸಿದ್ಧವಿರಲಿದೆ. ಹಿಂದಿನ ವರ್ಷಗಳಲ್ಲಿ ಶೌಚಾಲಯಗಳನ್ನು ಗುತ್ತಿಗೆಗೆ ನೀಡಲಾಗುತ್ತಿತ್ತು, ಆದರೆ ಈ ಬಾರಿ ಭಕ್ತರಿಗೆ ಸಂಪೂರ್ಣ ಉಚಿತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅದರ ನಿರ್ವಹಣೆಯನ್ನು ದೇವಸ್ವಂ ಮಂಡಳಿಯೇ ನೇರವಾಗಿ ವಹಿಸಿಕೊಂಡಿದೆ. ಒಟ್ಟಿನಲ್ಲಿ ಈ ಬಾರಿ ಅಯ್ಯಪ್ಪ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅತ್ಯುತ್ತಮ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.
#Sabarimala2026 #AyyappaSwamy #CochinAirport #HelicopterService #KeralaNews #Udayakala #SabarimalaPilgrimage #MandalaPooja

