Menu

ಹೊರ ರಾಜ್ಯದಲ್ಲಿ ವ್ಯಾಸಂಗ ಮಾಡುವ ರಾಜ್ಯದ ವಿದ್ಯಾರ್ಥಿಗೂ ಉಚಿತ ಬಸ್ ಪಾಸ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯಡಿ ಹೊರ ರಾಜ್ಯಗಳ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯಗಳಲ್ಲಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ನೆರೆ ರಾಜ್ಯಗಳಲ್ಲಿ (ರಾಜ್ಯದ ಗಡಿಭಾಗಗಳಲ್ಲಿ) ವಾಸವಿದ್ದು ರಾಜ್ಯದೊಳಗಿರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಈ ಉಚಿತ ಬಸ್ ಪಾಸ್ ಲಭ್ಯವಿರುತ್ತದೆ.

ವಿದ್ಯಾರ್ಥಿಗಳ ಉಚಿತ ಬಸ್‌ ಪಾಸ್‌  ನಿಯಮಾವಳಿಗಳು,

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಇನ್ನು ಮುಂದೆ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರೆಲ್ಲರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ರಸ್ತೆ ಸಾರಿಗೆ ನಿಗಮಗಳು ಮತ್ತು ಸಂಸ್ಥೆಗಳು ವಿದ್ಯಾರ್ಥಿಗಳ ಉಚಿತ ಪಾಸ್ ವಿತರಣೆಗೆ ಸಂಬಂಧಿಸಿದಂತೆ ಹಾಲಿ ಇರುವ ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ. ವಿದ್ಯಾರ್ಥಿ ಪಾಸಿಗಾಗಿ ಶೈಕ್ಷಣಿಕ ವಿದ್ಯಾಭ್ಯಾಸದ ಅರ್ಹತಾ ಮಾನದಂಡಗಳು, ದೂರದ ಮಿತಿ, ಪಾಸಿನ ಕಾಲಾವಧಿಯಂತಹ ನಿಬಂಧನೆಗಳು ಅನ್ವಯವಾಗುತ್ತವೆ.

ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್ ನಲ್ಲಿ ಎಲ್ಲಿಂದ ಬೇಕಾದರೂ ಆನ್ ಲೈನ್ ನಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.   ಈಗಾಗಲೇ ವಿತರಿಸಲಾಗಿರುವ ಬಸ್ ಪಾಸ್ ಗಳನ್ನು ಬಳಸಿಯೂ ವಿದ್ಯಾರ್ಥಿಗಳು ಪ್ರಯಾಣಿಸಬಹುದು. ಇದಕ್ಕಾಗಿ ಪಾವತಿಸಿರುವ ಹಣವನ್ನು 15 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಸಲಾಗುತ್ತದೆ.

ಉಚಿತ ಬಸ್ ಪಾಸ್ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಪಘಾತ ವಿಮೆಯೂ ಇರಲಿದೆ. ಇದಕ್ಕೆ ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿಗೆ 5 ರೂಪಾಯಿಗಳನ್ನು ಸರ್ಕಾರವೇ ಕಂತನ್ನು ಪಾವತಿಸಲಿದೆ.

ಪ್ರತಿ ಬಸ್ ಪಾಸ್ ಗೆ ತಲಾ 100 ರೂಪಾಯಿಯಂತೆ ಸಂಸ್ಕರಣಾ ಶುಲ್ಕವನ್ನು ಸರ್ಕಾರವೇ ನಿಗಮಗಳಿಗೆ ಭರಿಸಲಿದೆ. ಈ ಅಪಘಾತ ಪರಿಹಾರ ನಿಧಿ ಮತ್ತು ಸಂಸ್ಕರಣೆಗೆ ತಗಲುವ ಸುಮಾರು 15 ಕೋಟಿ ರೂಪಾಯಿಗಳನ್ನು ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಸರ್ಕಾರವೇ ಪಾವತಿಸಲಿದೆ.

ಪ್ರಸ್ತುತ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಿಂದ 19,792 ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಬಸ್ ಪಾಸ್ ಖರೀದಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮುಂದಿನ 15 ದಿನಗಳಲ್ಲಿ ಈ ಹಣವನ್ನು ಮರುಪಾವತಿ ಮಾಡಲಾಗುತ್ತದೆ. ಇದೇ ವೇಳೆ, ಹಳೆಯ ಬಸ್ ಪಾಸ್ ಅನ್ನು ಉಚಿತವಾಗಿ ಬಳಸಿ ಪ್ರಯಾಣಿಸಬಹುದಾಗಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಣೆಗೆ ವಾರ್ಷಿಕ 286.08 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ. ಈ ಹಣವನ್ನೂ ಸಹ ರಾಜ್ಯ ಸರ್ಕಾರ ನಾಲ್ಕು ಸಾರಿಗೆ ಸಂಸ್ಥೆಗಳು/ನಿಗಮಗಳಿಗೆ ಬಿಡುಗಡೆ ಮಾಡಲಿದೆ.

Related Posts

Leave a Reply

Your email address will not be published. Required fields are marked *