ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ತಾವು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠವು ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಂಗ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಹೇಳಿದೆ. ಚುನಾವಣೆಗಳು ನಡೆಯುತ್ತಿರುವಾಗ ನ್ಯಾಯಾಂಗ ಹಸ್ತಕ್ಷೇಪ ಮಾಡಬಾರದು ಎಂಬುದು ಸ್ಥಾಪಿತ ಕಾನೂನು ನಿಲುವು, ನಾಮಪತ್ರ ತಿರಸ್ಕಾರದ ವಿರುದ್ಧ ಚುನಾವಣಾ ಅರ್ಜಿ ಸಲ್ಲಿಸುವುದಷ್ಟೇ ಸದ್ಯಕ್ಕಿರುವ ಕಾನೂನು ಪರಿಹಾರ.
ನಾಮಪತ್ರ ತಿರಸ್ಕಾರವು ಮೇಲ್ನೋಟಕ್ಕೆ ತಪ್ಪು ಎಂದು ಕಂಡುಬಂದರೂ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ‘ಫಾರಂ 26’ ಅಫಿಡವಿಟ್ ಅಪೂರ್ಣವಾಗಿತ್ತು ಮತ್ತು ಅವರ ವಿರುದ್ಧ ಬಾಕಿ ಇರುವ ಖಾಸಗಿ ದೂರು ಪ್ರಕರಣದ ವಿವರಗಳನ್ನು ಮುಚ್ಚಿಟ್ಟಿದ್ದರು ಎಂಬ ಕಾರಣ ನೀಡಿ ಚುನಾವಣಾಧಿಕಾರಿ ನಾಮಪತ್ರವನ್ನು ತಿರಸ್ಕರಿಸಿದ್ದರು. ಈ ದೂರು ಪ್ರಕ್ರಿಯೆಗೆ ಸಂಬಂಧಿಸಿದಂತೆ ನಟರಾಜನ್ ಈ ಹಿಂದೆ ಲಿಖಿತ ಸಲ್ಲಿಕೆಗಳನ್ನು ಮಾಡಿದ್ದರಿಂದ, ಅವರಿಗೆ ಈ ಪ್ರಕರಣದ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬುದನ್ನು ಚುನಾವಣಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದರು.
ನಟರಾಜನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಫ್ಟಿ, ದೂರು ದಾಖಲಾಗಿರುವ ಪ್ರಕರಣದಲ್ಲಿ ನ್ಯಾಯಾಲಯ ಯಾವುದೇ ಕಾಗ್ನಿಜೆನ್ಸ್ ತೆಗೆದುಕೊಂಡಿಲ್ಲ ಅಥವಾ ದೋಷಾರೋಪಣೆ ಪಟ್ಟಿ ಸಿದ್ಧಪಡಿಸಿಲ್ಲ. ಹೀಗಿರುವಾಗ ನಾಮಪತ್ರ ತಿರಸ್ಕರಿಸಿರುವುದು ಕಾನೂನುಬಾಹಿರ ಎಂದು ವಾದಿಸಿದರು. ಅಪರೂಪದ ಸಂದರ್ಭಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಬಹುದು ಎಂಬ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿದರು.
ಚುನಾವಣಾ ಆಯೋಗ ಮತ್ತು ಎದುರಾಳಿ ಅಭ್ಯರ್ಥಿ, ನಾಮಪತ್ರ ತಿರಸ್ಕೃತಗೊಂಡರೆ ಚುನಾವಣೆ ಮುಗಿದ ಬಳಿಕ ಚುನಾವಣಾ ಅರ್ಜಿ ಸಲ್ಲಿಸುವುದಷ್ಟೇ ಏಕೈಕ ಮಾರ್ಗ. ಸಂವಿಧಾನದ ವಿಧಿ 32 ಅಥವಾ 226ರ ಅಡಿ ಪ್ರಕ್ರಿಯೆಯ ಮಧ್ಯೆ ಇದನ್ನು ಪ್ರಶ್ನಿಸಲು ಬರುವುದಿಲ್ಲ ಎಂದು ವಾದ ಮಂಡಿಸಿದರು.
ನಾಮಪತ್ರ ತಿರಸ್ಕಾರದ ವಿರುದ್ಧ ಮೀನಾಕ್ಷಿ ನಟರಾಜನ್ ಜೂನ್ 10 ರಂದು ಚುನಾವಣಾ ಆಯೋಗದ ಮುಂದೆ ಹಾಜರಾಗಿ ವಾದ ಮಂಡಿಸಿದ್ದರು. ಆಯೋಗದಿಂದ ಯಾವುದೇ ಆದೇಶ ಬಂದಿಲ್ಲ, ಹೀಗಾಗಿ ಅವರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು.


