Saturday, October 10, 2026
Menu

ಜಿಬಿಎ ಚುನಾವಣೆ: ಗಡುವು ಆಗಸ್ಟ್ 31ರವರೆಗೆ ವಿಸ್ತರಿಸಿದ ಸುಪ್ರೀಂಕೋರ್ಟ್‌

ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ಜೂನ್​​ 30ರವರೆಗೆ ನೀಡಿದ್ದ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ಮನವಿಯಂತೆ ಕೋರ್ಟ್ ಈ ಕ್ರಮ ಕೈಗೊಂಡಿದೆ. ಇದೇ ಅಂತಿಮ ಅವಕಾಶ. ಮತ್ತಷ್ಟು ವಿಸ್ತರಣೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠ ಈ ಬಗ್ಗೆ ಆದೇಶ ನೀಡಿದ್ದು, ಕರ್ನಾಟಕ ಸರ್ಕಾರ ಪರ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಗಡುವು ವಿಸ್ತರಣೆ ಕೋರಿ ಮನವಿ ಸಲ್ಲಿಸಿದ್ದರು.

ರಾಜ್ಯದಲ್ಲಿ ನಡೆಯಲಿರುವ ವಿಶೇಷ ಮತದಾರರ ಪರಿಶೀಲನೆ ಕಾರ್ಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗುತ್ತಿದೆ ಎಂದು ವಾದಿಸಿದ್ದರು. ವಿರೋಧ ವ್ಯಕ್ತಪಡಿಸಿದ ಹಿರಿಯ ವಕೀಲ ಕೆ. ಪರಮೇಶ್ವರ್, ಹಿಂದಿನ ಗಡುವು ವಿಸ್ತರಣೆ ವೇಳೆ ಜೂನ್ 30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಭರವಸೆ ನೀಡಿತ್ತು ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಸಿಂಘ್ವಿ, ಚುನಾವಣೆಗೆ ಅಗತ್ಯ ಸಿದ್ಧತೆಗಳೆಲ್ಲ ಪೂರ್ಣಗೊಂಡಿದ್ದರೂ ವಿಶೇಷ ಮತದಾರರ ಪರಿಶೀಲನೆ ಕಾರಣ ಸಿಬ್ಬಂದಿ ಸಮಸ್ಯೆ ಇದೆ. ಕನಿಷ್ಠ ಎರಡರಿಂದ ಮೂರು ತಿಂಗಳು ಅವಧಿ ವಿಸ್ತರಣೆ ಅಗತ್ಯ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ರಾಜ್ಯ ಚುನಾವಣಾ ಆಯೋಗವೂ ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವಂತೆ ಕೋರ್ಟ್​​ ಈ ಹಿಂದೆ ನೀಡಿದ್ದ ಗಡುವು ವಿಸ್ತರಿಸುವಂತೆ ಕೋರಿ ಮನವಿ ಸಲ್ಲಿಸಿತ್ತು.

Related Posts