ಫುಟ್ಬಾಲ್ ಪಟುವಾಗಿರುವ ಬಾಲಕಿಯ ಮೇಲೆ ತರಬೇತುದಾರ ಮೂರು ವರ್ಷ ಅತ್ಯಾಚಾರ ಎಸಗಿದ್ದಲ್ಲದೆ, ವೀಡಿಯೊ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣವೊಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯಾಗಿರುವ ಖಾಸಗಿ ಫುಟ್ಬಾಲ್ ತರಬೇತುದಾರ 36 ವರ್ಷದ ಅಭಿಜಿತ್ ಮೆಂಡಲ್ ಎಂಬಾತನನ್ನು ಪೊಲೀಸರು ಬಂಧಿಸಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. 2023 ರಲ್ಲಿ ವಸಾಯಿಯಲ್ಲಿರುವ ಫುಟ್ಬಾಲ್ ತರಬೇತಿ ಅಕಾಡೆಮಿಗೆ ಸೇರಿದ್ದ 17 ವರ್ಷದ ಬಾಲಕಿಯ ಮೇಲೆ ಮೆಂಡಲ್ ಪದೇ ಪದೆ ಅತ್ಯಾಚಾರ ಎಸಗಿದ್ದಾನೆ. ಆಕ್ಷೇಪಾರ್ಹ ವೀಡಿಯೊಗಳನ್ನು ಮಾಡಿಟ್ಟುಕೊಂಡು ಅವುಗಳನ್ನು ಬಳಸಿಕೊಂಡು ಬಾಲಕಿಗೆ ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕೋಚ್ ಮೆಂಡಲ್ ಫುಟ್ಬಾಲ್ನಲ್ಲಿ ದೊಡ್ಡ ದೊಡ್ಡ ಅವಕಾಶಗಳ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದು, ಮೂರು ವರ್ಷಗಳಲ್ಲಿ ಹಲವು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಲೈಂಗಿಕ ದೌರ್ಜನ್ಯದಿಂದ ಬೇಸತ್ತ ಬಾಲಕಿ ಆತನ ಸಂಪರ್ಕ ತಪ್ಪಿಸಲು ಪ್ರಯತ್ನಿಸಿದ್ದಾಳೆ. ಆರೋಪಿ ತನ್ನ ಬಳಿಯಿದ್ದ ವಿಡಿಯೋಗಳು ಮತ್ತು ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದ. ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಸೋಷಿಯಲ್ ಮೀಡಿಯಾಗಳಲ್ಲಿ ವೀಡಿಯೊ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ನೊಂದ ಬಾಲಕಿ ಕೊನೆಗೆ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಕುಟುಂಬ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ವಸಾಯಿಯ ಮಾಣಿಕ್ಪುರ ಪೊಲೀಸರು ಪ್ರಾಥಮಿಕ ವಿಚಾರಣೆಯ ನಂತರ ಮೆಂಡಲ್ನನ್ನು ಬಂಧಿಸಿದ್ದಾರೆ.


