ಮಾಂಸದಡುಗೆ ವಿಚಾರವಾಗಿ ದಂಪತಿ ಮಧ್ಯೆ ಆರಂಭವಾದ ಜಗಳ ಪತಿಯ ಕೊಲೆಯಲ್ಲಿ ಅಂತ್ಯ ಕಂಡಿದ್ದು, ಕೊಲೆ ಆರೋಪಿ ಪತ್ನಿ ಜೈಲು ಸೇರಿರುವ ಪ್ರಕರಣ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ.
ಕೋದಂಡ ಶಿವಾಜಿ ಮತ್ತು ಲಕ್ಷ್ಮಿ ದಂಪತಿ ಇಬ್ಬರುಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ಕುಟುಂಬವು ಇತ್ತೀಚೆಗೆ ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿತ್ತು. ದಂಪತಿಗಳ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಾಜಿ ಮನೆಯಲ್ಲಿ ಮಾಂಸಾಹಾರ ಅಡುಗೆ ಮಾಡದಿರುವ ಬಗ್ಗೆ ಲಕ್ಷ್ಮಿಯನ್ನು ಪ್ರಶ್ನಿಸಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಬೇಸತ್ತಿದ್ದ ಆಕೆ ಮತ್ತು ಶಿವಾಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದ ಭರದಲ್ಲಿ ವಿವೇಚನೆ ಕಳೆದುಕೊಂಡ ಲಕ್ಷ್ಮಿ ಮಚ್ಚಿನಿಂದ ಪತಿ ಶಿವಾಜಿಯ ಕುತ್ತಿಗೆಗೆ ಹೊಡೆದಿದ್ದಾಳೆ. ಶಿವಾಜಿ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಕಿರುಚಾಟ ಕೇಳಿ ನೆರೆಹೊರೆಯವರು ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗ ತಾಯಿ ಜೈಲು ಪಾಲಾಗಿ, ತಂದೆ ಮೃತಪಟ್ಟಿದ್ದು, ಎರಡು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ. ಲಕ್ಷ್ಮಿ ವಿರುದ್ಧ ಸದ್ಯ ಕೊಲೆ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.


