ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ ಹಾಸನದ 25 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಶ್ವೇತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಮತ್ತು ಸರೋಜ ದಂಪತಿಯ ಮಗಳು ಶ್ವೇತಾ(25) ಮೃತಪಟ್ಟವರು. ಆಕೆ ಹಾಸನದ ಮ್ಯಾಗ್ನಾ ಕಂಪನಿಯಲ್ಲಿ ಮೂರು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 25ರ ಶುಕ್ರವಾರ ಸಂಜೆ ಮನೆಯಲ್ಲಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದರು. ತಕ್ಷಣ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಶ್ವೇತಾ ಕೋಮಾಗೆ ಜಾರಿದ್ದರು. ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವುದಾಗಿ ತಿಳಿಸಿದ್ದರು.
ಚಿಕಿತ್ಸೆ ನೀಡುತ್ತಿರುವಾಗಲೇ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಶ್ವೇತಾ ಅಸು ನೀಗಿದ್ದಾರೆ. ಪೋಷಕರು ಶ್ವೇತಾ ಅವರ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಆಕೆಯ ದೇಹದ ಆರೋಗ್ಯದ ಸ್ಥಿತಿಗತಿ ಕಾರಣದಿಂದ ಅಂಗಾಂಗ ದಾನ ಸಾಧ್ಯವಾಗಲಿಲ್ಲ.


