ಚೀನಾದ ಹುನಾನ್ ಪ್ರಾಂತ್ಯದ ಲಿಯುಯಾಂಗ್ ನಗರದಲ್ಲಿರುವ ಪಟಾಕಿ ಉತ್ಪಾದನಾ ಘಟಕದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಹುನಾನ್ ಪ್ರಾಂತ್ಯದ ಲಿಯುಯಾಂಗ್ ನಗರದಲ್ಲಿ ಸೋಮವಾರ ಸಂಜೆ ಈ ದುರಂತ ಸಂಭವಿಸಿದೆ. 21 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 61 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ತನಿಖೆಗೆ ಆದೇಶಿಸಿದ್ದಾರೆ.
ಈ ನಡುವೆ ಯುಎಇಯ ತೈಲ ಸಂಗ್ರಹಣಾ ಕೇಂದ್ರದ ಮೇಲೆ ನಡೆದ ಡ್ರೋನ್ ದಾಳಿಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಮೂವರು ಭಾರತೀಯರು ಗಾಯಗೊಂಡಿದ್ದಾರೆ. ಅರಬ್ ಎಮಿರೇಟ್ಸ್ ಫುಜೈರಾ ಪೆಟ್ರೋಲಿಯಂ ಇಂಡಸ್ಟ್ರೀಸ್ ವಲಯದಲ್ಲಿ ಘಟನೆ ನಡೆದಿದೆ. ಇರಾನ್‌ನಿಂದ ಬಂದ ಡ್ರೋನ್ ದಾಳಿಯಿಂದ ಈ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಮೂವರು ಭಾರತೀಯರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಸತಿ ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಮೂವರ ಸಾವು
ಐದು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಆಗ್ನೇಯ ಬ್ರೆಜಿಲ್‌ನ ಬೆಲೊ ಹೊರಿಜಾಂಟೆಯಲ್ಲಿ ವಸತಿ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮವಾಗಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರ ಕೇಂದ್ರದಿಂದ ಎಂಟು ಕಿ.ಮೀ ದೂರದಲ್ಲಿರುವ ಪಂಪುಲ್ಹಾ ವಿಮಾನ ನಿಲ್ದಾಣದಿಂದ ವಿಮಾನ ಹಾರಿದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದೆ. ವಿಮಾನವು ಸಾವೊ ಪಾಲೊಗೆ ತೆರಳುತ್ತಿತ್ತು. ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಅಸು ನೀಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.


