ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾರಿನಲ್ಲೇ ಮಹಿಳೆ ಸಜೀವ ದಹನಗೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪತ್ನಿಗೆ ಡಿವೋರ್ಸ್ ನೀಡಿದ ತನ್ನ ಜೊತೆ ಪತಿಯನ್ನು ಬಿಟ್ಟು ಬರಲು ಒಪ್ಪದ ಪ್ರಿಯತಮೆಯನ್ನು ಕಾರಿನಲ್ಲಿ ಕೊಲೆ ಮಾಡಿ ಬೆಂಕಿ ಹಚ್ಚಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ.
ರಾಮಾಂಜಿನಪ್ಪ ಎಂಬಾತ ಪ್ರಿಯತಮೆ ಸುಜಾತಳನ್ನು (35) ಕಾರಿನಲ್ಲಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಸುಜಾತಾ ದೇವನಹಳ್ಳಿಯವರಾಗಿದ್ದು, ರಾಮಾಂಜಿನಪ್ಪ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಇದೇ ಕಾರಣಕ್ಕೆ ನಾಲ್ಕು ತಿಂಗಳ ಹಿಂದೆ ರಾಮಾಂಜಿನಪ್ಪ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ. ಸುಜಾತಳಿಗೂ ಗಂಡನ ಬಿಟ್ಟು ಬರುವಂತೆ ಟಾರ್ಚರ್ ನೀಡುತ್ತಿದ್ದ. ಆದರೆ ಸುಜಾತ ಗಂಡನ ಬಿಟ್ಟು ಬರಲು ಒಪ್ಪಿರಲಿಲ್ಲ.
ಈ ಸಿಟ್ಟಿನಿಂದ ಏ.2ರಂದು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾತಳನ್ನು ಹೊಡೆದು ಕೊಲೆ ಮಾಡಿ ಕಾರಿಗೆ ಬೆಂಕಿಯಿಟ್ಟು ತಲೆ ಮರೆಸಿಕೊಂಡಿದ್ದ. ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಾರಸಂದ್ರದ ಸುರೇಶ್ ಅವರದ್ದು ಎಂದು ಗೊತ್ತಾಗಿತ್ತು. ಕಾರನ್ನು ರಾಮಾಂಜಿನಪ್ಪ ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ. ಬೆಂಗಳೂರಿನ ಬಿಡದಿ ರೈಲು ನಿಲ್ದಾಣ ಬಳಿ ರಾಮಾಂಜಿನಪ್ಪ ಶವ ಪತ್ತೆಯಾಗಿದೆ. ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


