ಬೆಂಗಳೂರು ನಗರದ ನಾನಾ ಕಡೆ ದಾಳಿ ನಡೆಸಿದ ಪೊಲೀಸರು 11.86 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಮಹಿಳೆಯರು ಹಾಗೂ ಹೊರರಾಜ್ಯದ ಐವರು ಸೇರಿದಂತೆ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದಾರೆ.
ಯಲಹಂಕ, ಡಿ.ಜೆ.ಹಳ್ಳಿ, ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ ಹಾಗೂ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 5.9 ಕೆಜಿ ಎಂಡಿಎಂಎ, 1.15 ಕೆಜಿ ಕೊಕೇನ್, 21 ಕೆಜಿ ಗಾಂಜಾ ಮತ್ತು 19 ಗ್ರಾಂ ಎಕ್ಸ್‌ಟೆಸಿ ಮಾತ್ರೆಗಳು ಸೇರಿವೆ. ಒಂದು ದ್ವಿಚಕ್ರ ವಾಹನವನ್ನು ಸೀಜ್ ಮಾಡಲಾಗಿದೆ. ವಿದೇಶಿ ಮಹಿಳೆಯರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿ ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಪೊಲೀಸರಿಂದ ಹಲವು ಡ್ರಗ್ಸ್ ಜಪ್ತಿ ಪ್ರಕರಣಗಳು ನಡೆದಿವೆ. ಮಾರ್ಚ್ 12ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4 ಕೋಟಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿತ್ತು. ಮಾರ್ಚ್ 28ರಂದು ಎಲೆಕ್ಟ್ರಾನಿಕ್ ಸಿಟಿಯ ನೈಜೀರಿಯನ್ ಪ್ರಜೆಯಿಂದ 2.5 ಕೋಟಿ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶ ಪಡಿಸಲಾಗಿತ್ತು. ಏಪ್ರಿಲ್ 05ಂದು ಸಿಸಿಬಿ ಪೊಲೀಸರು ದೊಡ್ಡಬಳ್ಳಾಪುರ ರಸ್ತೆಯಲ್ಲಿ ಅಂತರಾಷ್ಟ್ರೀಯ ಡ್ರಗ್ಸ್ ಜಾಲ ಭೇದಿಸಿ 5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದರು.


