ಮ್ಯಾಡ್ರಿಡ್: ಸ್ಪೇನ್‌ನ ಕೇಂದ್ರ ಭಾಗದ ಟೊಲೆಡೊ ಪ್ರಾಂತ್ಯದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತದಲ್ಲಿ 46 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿರುವ ಕುರಿತು ವರದಿಯಾಗಿದೆ. ದೇಶದ ಅತ್ಯಂತ ಜನನಿಬಿಡ ಮತ್ತು ಆಧುನಿಕ ರೈಲು ಮಾರ್ಗದಲ್ಲಿ ನಡೆದ ಈ ದುರ್ಘಟನೆಯು ಇಡೀ ವಿಶ್ವದಲ್ಲೇ ದೊಡ್ಡ ಆಘಾತವನ್ನುಂಟುಮಾಡಿದೆ.
ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದ ರೈಲುಗಳು!
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಒಂದೇ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದ ಎರಡು ಅತಿವೇಗದ ರೈಲುಗಳ ನಡುವೆ ಈ ಭೀಕರ ಡಿಕ್ಕಿ ಸಂಭವಿಸಿದೆ. ಐರಿಯೊ (Iryo) ಮತ್ತು ರೆಂಫೆ (Renfe) ಕಂಪನಿಗಳಿಗೆ ಸೇರಿದ ಈ ರೈಲುಗಳು ಮ್ಯಾಡ್ರಿಡ್‌ನಿಂದ ಸೆವಿಲ್ಲೆ ಕಡೆಗೆ ತೆರಳುತ್ತಿದ್ದವು. ಈ ಪೈಕಿ ಒಂದು ರೈಲು ಮತ್ತೊಂದು ರೈಲಿನ ಹಿಂದಿನ ಭಾಗಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರೈಲಿನ ಎರಡು ಬೋಗಿಗಳು ಸಂಪೂರ್ಣವಾಗಿ ಹಳಿ ತಪ್ಪಿ ಉರುಳಿಬಿದ್ದಿವೆ. ಅಪಘಾತದ ತೀವ್ರತೆಗೆ ಬೋಗಿಗಳು ನಜ್ಜುಗುಜ್ಜಾಗಿವೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ: ಸಾವು ಹೆಚ್ಚಾಗುವ ಸಂಭವ
ಘಟನಾ ಸ್ಥಳದಲ್ಲಿ ತುರ್ತು ಸೇವೆಗಳು ಮತ್ತು ರಕ್ಷಣಾ ಪಡೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ಗಾಯಗೊಂಡ ಪ್ರಯಾಣಿಕರನ್ನು ಹೆಲಿಕಾಪ್ಟರ್‌ಗಳು ಮತ್ತು ಆಂಬ್ಯುಲೆನ್ಸ್‌ಗಳ ಮೂಲಕ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಅಪಘಾತದಲ್ಲಿ ಮೃತರಾದವರ ನಿಖರ ಸಂಖ್ಯೆ ಇನ್ನೂ ಅಧಿಕೃತವಾಗಿ ಹೊರಬಂದಿಲ್ಲವಾದರೂ, ಸ್ಥಳೀಯ ಆಡಳಿತದ ಮಾಹಿತಿಯಂತೆ ಸಾವಿನ ಸಂಖ್ಯೆ 46ಕ್ಕೇರಿದೆ ಹಾಗೂ ರಕ್ಷಣಾ ಕಾರ್ಯ ಮುಂದುವರೆದಂತೆ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂಜಲಾಗಿದೆ.
ಪ್ರಮುಖ ರೈಲು ಮಾರ್ಗಗಳ ಸಂಪರ್ಕ ಕಡಿತ
ಈ ದುರಂತದಿಂದಾಗಿ ಸ್ಪೇನ್ ರಾಜಧಾನಿ ಮ್ಯಾಡ್ರಿಡ್ ಅನ್ನು ದಕ್ಷಿಣದ ಅಂಡಲೂಸಿಯಾ, ಸಿಯುಡಾಡ್ ರಿಯಲ್ ಹಾಗೂ ಇತ್ಯಾದಿ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುವ ಹೈಸ್ಪೀಡ್ ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಿಗ್ನಲ್ ವ್ಯವಸ್ಥೆಯಲ್ಲಿನ ವ್ಯತ್ಯಯ ಅಥವಾ ಮಾನವ ದೋಷವೇ ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ರೈಲು ಸಂಚಾರ ಯಾವಾಗ ಯಥಾಸ್ಥಿತಿಗೆ ಮರಳಲಿದೆ ಎಂಬುದರ ಕುರಿತು ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
#SpainTrainCrash #MadridNews #ToledoAccident #WorldNews #TrainTragedy #BreakingNews #UdayakalaNews


