ಉದಯಕಾಲ ನ್ಯೂಸ್, ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲೂಕಿನ ದೇಮಟ್ಟಿ – ಮಲ್ಲಾಪುರ ಗ್ರಾಮಗಳ ಬಳಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿದ್ದ ದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಮತ್ತು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಈ ಘಟನೆಯು ಇಡೀ ಗ್ರಾಮದಲ್ಲಿ ತೀವ್ರ ಶೋಕಮೂಡಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಧಾರವಾಡ ತಾಲೂಕಿನ ಹೆಗ್ಗೇರಿ ಗ್ರಾಮದ ನಿವಾಸಿಗಳಾದ ಅಜಾದ್ ಇಸ್ಮಾಯಿಲ್ ಜಮಾದಾರ (45), ಅವರ ಪತ್ನಿ ಕೈರೂನ್ ಆಜಾದ್ ಜಮಾದಾರ (40) ಹಾಗೂ ಅಜಾದ್ ಅವರ ಅಳಿಯ, ದೇಮಟ್ಟಿ ಗ್ರಾಮದ ಬಾಬಾಜಾನ್ ನಿಸ್ಸಾರ್ ಅಹ್ಮದ್ ತಡಕೋಡ (16) ಮೃತ ದುರ್ದೈವಿಗಳಾಗಿದ್ದಾರೆ.
ಮೃತರಾದ ಮೂವರು ದೇಮಟ್ಟಿಯಿಂದ ಬೈಕ್ ಮೂಲಕ ಹೆಗ್ಗೇರಿಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಮಲ್ಲಾಪುರ ಬಳಿ ವೇಗವಾಗಿ ಬಂದ ಟಾಟಾ ಏಸ್ ವಾಹನವು ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡು ರಸ್ತೆಗೆ ಉರುಳಿದ್ದಾರೆ. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಇಬ್ಬರು ಕೊನೆಯುಸಿರೆಳೆದರೆ, ಮತ್ತೊಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅತಿವೇಗ ಮತ್ತು ನಿರ್ಲಕ್ಷ್ಯವೇ ಕಾರಣ
ವಾಹನಗಳ ಅತೀ ವೇಗ ಮತ್ತು ಚಾಲಕರ ನಿರ್ಲಕ್ಷ್ಯವೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಕಿತ್ತೂರು ಠಾಣೆಯ ವೃತ್ತ ನಿರೀಕ್ಷಕ (ಸಿಪಿಐ) ಶಿವಾನಂದ ಗುಡಗನಟ್ಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಪಘಾತದ ನಂತರ ಕುಟುಂಬದಲ್ಲಿ ಆತಂಕ ಹಾಗೂ ಶೋಕದ ಮಡುಮು ಕವಿದಿತ್ತು. ಮೃತರಾದ ದಂಪತಿಯ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮವಾದ ಹೆಗ್ಗೇರಿಯಲ್ಲಿ ನೆರವೇರಿಸಲಾಗಿದ್ದು, ಅಳಿಯ ಬಾಬಾಜಾನ್‌ನ ಅಂತ್ಯಕ್ರಿಯೆಯನ್ನು ದೇಮಟ್ಟಿ ಗ್ರಾಮದಲ್ಲೇ ದತಿನಿಧಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಯಿತು.ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
#Belagavi #RoadAccident #Kittur #UdayakalaNews #KarnatakaNews #AccidentNews #TataAce

