Menu

ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್‌ ಆಮಿಷ: ಕಡೂರು ರೈತರಿಗೆ 1.35 ಕೋಟಿ ರೂ. ವಂಚನೆ

ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆಸರ್ಕಾರಿ ಇಲಾಖೆಗಳಿಂದ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಉಪಕರಣಗಳನ್ನು ಕೊಡಿಸುವುದಾಗಿ ರೈತರನ್ನು ನಂಬಿಸಿ 1,34,98,400 ರೂಪಾಯಿ ಪಡೆದು ವಂಚಿಸಿರುವ ಪ್ರಕರಣ ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೈ. ಮಲ್ಲಾಪುರ ಗ್ರಾಮದ ನಿವಾಸಿ ಮಹೇಶ್ವರಪ್ಪ ಎಂ.ಬಿ. ಎಂಬವರು ಈ ಸಂಬಂಧ ದೂರು ನೀಡಿದ್ದಾರೆ. ಬೆಂಗಳೂರಿನ ಗಂಗಾಧರಗೌಡ ಕೆ. ಎಂಬಾತ ಈ ವಂಚನೆಯ ಜಾಲದ ಸೂತ್ರಧಾರ ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.

ದೂರುದಾರ ಮಹೇಶ್ವರಪ್ಪ ಅವರಿಗೆ 2024ರ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಈ ಗಂಗಾಧರಗೌಡ ಪರಿಚಯವಾಗಿದ್ದ. 50,000 ರೂ. ಮುಂಗಡವಾಗಿ ಪಾವತಿಸಿದರೆ, ಮೂರು ಲಕ್ಷ ರೂಪಾಯಿಗಳ ಸರ್ಕಾರಿ ಸಬ್ಸಿಡಿಯೊಂದಿಗೆ ಟ್ರ್ಯಾಕ್ಟರ್ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿದ್ದ. ಜುಲೈ 2024ರಲ್ಲಿ ಸಖರಾಯಪಟ್ಟಣಕ್ಕೆ ಭೇಟಿ ನೀಡಿದ್ದ ಆರೋಪಿ, ಮಹೇಶ್ವರಪ್ಪ ಅವರಲ್ಲದೆ ಸೋಮಶೇಖರ್, ದಿನೇಶ್‌, ಕಲ್ಲೇಶಪ್ಪ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ರೈತರಿಂದ ಹಣ ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಂಚಕ ಗಂಗಾಧರಗೌಡ ಹಣವನ್ನು ನಗದು ರೂಪದಲ್ಲಿ ಮಾತ್ರವಲ್ಲದೆ ವಿವಿಧ ಫೋನ್-ಪೇ ನಂಬರ್‌ಗಳ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. 8125041599 ಮತ್ತು 8125159955 ಸೇರಿದಂತೆ ವಿವಿಧ ನಂಬರ್‌ಗಳಿಗೆ ರೈತರು ಲಕ್ಷಾಂತರ ರೂಪಾಯಿಗಳನ್ನು ಕಳುಹಿಸಿದ್ದಾರೆ. ಒಟ್ಟಾರೆ 80 ರೈತರಿಂದ 1,34,98,400 ರೂಪಾಯಿ ವಂಚಿಸಿದ್ದಾನೆ.

ಹಣ ಪಡೆದ ನಂತರ ಕೆಲವು ದಿನ ‘ಬಜೆಟ್ ಅನುಮೋದನೆಯಾಗಿಲ್ಲ’, ‘ಅಧಿವೇಶನ ನಡೆಯುತ್ತಿದೆ’ ಎಂಬಿತ್ಯಾದಿ ಸಬೂಬು ಹೇಳಿಕೊಂಡು ಕಾಲ ಕಳೆದಿದ್ದಾನೆ. ದಿನ ಕಳೆದಂತೆ ಫೋನ್ ಸ್ವಿಚ್ ಆಫ್ ಆಗಿದೆ. ರೈತರು ಮೋಸ ಹೋಗಿರುವುದು ಖಚಿತವಾದ ಮೇಲೆ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *