ಕೊಲ್ಲಾಪುರದ ಚಂದಗಡ ತಾಲೂಕಿನಲ್ಲಿ ಕೋಳಿ ಫಾರ್ಮ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದ ಜಾಲವನ್ನು ಬಯಲಿಗೆಳೆದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯಿಂದ ಇಪ್ಪತ್ತು ಕಿ.ಮೀ ದೂರದ ಚಂದಗಡದ ರಾಜಗೋಳಿ ಗ್ರಾಮದಲ್ಲಿ ಆರೋಪಿಗಳು ಕೋಳಿ ಫಾರಂ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದರು. ಇಲ್ಲಿ ತಯಾರಿಸಿದ ಮಾದಕ ದ್ರವ್ಯಗಳನ್ನು ಮಹಾರಾಷ್ಟ್ರ, ಗೋವಾ, ಕರ್ನಾಟಕಕ್ಕೆ ಸರಬರಾಜು ಮಾಡುತ್ತಿದ್ದರು.
ಫ್ಯಾಕ್ಟರಿ ಮೇಲೆ ದಾಳಿ ನಡೆಸಿರುವ ಮಹಾರಾಷ್ಟ್ರ ಮಾದಕ ವಸ್ತು ವಿರೋಧಿ ಟಾಸ್ಕ್ ಫೋರ್ಸ್ ಅಧಿಕಾರಿಗಳು ಬೆಳಗಾವಿಯ ಇಬ್ಬರು ಸೇರಿದಂತೆ ಏಳು ಜನರನ್ನು ಬಂಧಿಸಿ 1.13 ಕೋಟಿ ರೂ. ಮೌಲ್ಯದ 208 ಗ್ರಾಮ್ ಡ್ರಗ್ಸ್, ರಾಸಾಯನಿಕ ವಸ್ತು ಹಾಗೂ ಯಂತ್ರೋಪಕರಣ ಜಪ್ತಿ ಮಾಡಿದ್ದಾರೆ.
ನಕಲಿ ಔಷಧ ದಂಧೆ: ಮೆಡಿಕಲ್ ಶಾಪ್‌ಗಳಿಗೆ ನೋಟಿಸ್
ನಕಲಿ ಔಷಧ ದಂಧೆ ಪ್ರಕರಣದ ತನಿಖೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು, ಆರೋಪಿಯಿಂದ ಔಷಧಿ ಪಡೆದಿದ್ದ ಮೆಡಿಕಲ್ ಶಾಪ್ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಇತ್ತೀಚೆಗೆ ರಾಮನಗರದ ಫಾರ್ಮ್‌ಹೌಸ್ ವೊಂದರಲ್ಲಿ ನಕಲಿ ಛಷಧಿ ದಂಧೆ ಘಟಕಕ್ಕೆ ದಾಳಿ ನಡೆಸಿ ಆರು ಕೋಟಿ ರೂ.ಬೆಲೆಯ ನಕಲಿ ಔಷಧಿ ವಶಪಡಿಸಲಾಗಿತ್ತು. ತನಿಖೆ ಇನ್ನಷ್ಟು ತೀವ್ರಗೊಳಿಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ಆರೋಪಿಗಳಿಂದ ನಕಲಿ ಔಷಧಿ ಖರೀದಿ ಮಾಡಿರುವ ಮೆಡಿಕಲ್‌ಗಳ ಮಾಲೀಕರ ಪತ್ತೆ ಮಾಡಿ, ನೋಟಿಸ್ ಕೊಟ್ಟಿದ್ದಾರೆ ಕಮರ್ಷಿಯಲ್ ಸ್ಟ್ರೀಟ್, ಚಾಮರಾಜಪೇಟೆಯಲ್ಲಿರುವ ಐದರಿಂದ ಆರು ಮೆಡಿಕಲ್ ಶಾಪ್ ಮಾಲೀಕರಿಗೆ ನೋಟಿಸ್ ಕೊಟ್ಟು, ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹಲವು ಕಡೆ ಆರೋಪಿಗಳಿಂದ ನಕಲಿ ಔಷಧ ಪಡೆದಿದ್ದ ಮೆಡಿಕಲ್‌ಗಳ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.
ಚಾಮರಾಜಪೇಟೆ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಕೆಲವೊಂದು ಮೆಡಿಕಲ್‌ಗಳಲ್ಲಿಳ ದಾಳಿ ವೇಳೆ ಕೆಲವು ಔಷಧಿ ವಶಕ್ಕೆ ಪಡೆದುಕೊಂಡಿದ್ದಾರೆ. ಎಷ್ಟು ವರ್ಷದಿಂದ ಆರೋಪಿಗಳ ಬಳಿಯಿಂದ ನಕಲಿ ಔಷಧಿ ಖರೀದಿ ಮಾಡುತ್ತಿದ್ದಾರೆ, ಯಾವ ಮಾದರಿಯ ಔಷಧ ಖರೀದಿ ಮಾಡಿದ್ದರು ಎಂಬ ಬಗ್ಗೆ ಎಸ್‌ಐಟಿ ಮಾಹಿತಿ ಕಲೆ ಹಾಕುತ್ತಿದೆ.


