ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾ ರಬೆಳಗಿನ ಜಾವ ವೆಂಟಿಲೇಟರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಮೂರು ನವಜಾತ ಶಿಶುಗಳು ಮೃತಪಟ್ಟಿವೆ. ಚಿಕಿತ್ಸೆ ಪಡೆಯುತ್ತಿದ್ದ ಹಲವು ಶಿಶುಗಳನ್ನು ಸ್ಥಳಾಂತರಿಸಲಾಗಿದೆ.
ಬೆಳಗಿನ ಜಾವ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ವೆಂಟಿಲೇಟರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. 39 ಶಿಶುಗಳು ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ ಇದ್ದವು. ಸುಟ್ಟಗಾಯಗಳು ಮತ್ತು ಹೊಗೆಯಿಂದ ಉಸಿರುಗಟ್ಟಿ ಮೂರು ಶಿಶುಗಳು ಅಸು ನೀಗಿವೆ.
ಬೆಂಕಿ ಹೊತ್ತಿಕೊಂಡ ನಂತರ ವೈದ್ಯರು, ನರ್ಸ್ಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಧಾವಿಸಿ ಶಿಶುಗಳನ್ನು ಸ್ಥಳಾಂತರಿಸಿದರು. ಅವಘಡದಿಂದ ಸಮಸ್ಯೆಗೊಳಗಾದ ಆರು ನವಜಾತ ಶಿಶುಗಳನ್ನು ಹತ್ತಿರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ದೇಶಾದ್ಯಂತ ಆಸ್ಪತ್ರೆಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿದ್ದು, ಕಡ್ಡಾಯ ಅಗ್ನಿಶಾಮಕ ಸುರಕ್ಷತಾ ತಪಾಸಣೆಗೆ ತಜ್ಞರು ಆಗ್ರಹಿಸಿದ್ದಾರೆ. ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವೈದ್ಯಕೀಯ ಉಪಕರಣಗಳ ಸುರಕ್ಷತೆ ಮತ್ತು ಅಗ್ನಿಶಾಮಕ ಮುನ್ನೆಚ್ಚರಿಕೆ ವೈಫಲ್ಯದ ಕುರಿತು ರಾಜ್ಯ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ .ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.


