ಸ್ಯಾನ್ ಜುವಾನ್ (ಪೋರ್ಟೊ ರಿಕೊ): ಜಾಗತಿಕ ಸೌಂದರ್ಯ ಲೋಕದ ಅತ್ಯಂತ ಪ್ರತಿಷ್ಠಿತ ವೇದಿಕೆಯಾದ 75ನೇ ಆವೃತ್ತಿಯ ‘ಮಿಸ್ ಯೂನಿವರ್ಸ್’ ಸೌಂದರ್ಯ ಸ್ಪರ್ಧೆಯು ಅತ್ಯಂತ ವರ್ಣರಂಜಿತವಾಗಿ ಮುಕ್ತಾಯಗೊಂಡಿದ್ದು, ಆತಿಥೇಯ ರಾಷ್ಟ್ರ ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ 2026ನೇ ಸಾಲಿನ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ತವರು ನೆಲದ ಅಭಿಮಾನಿಗಳ ಹರ್ಷೋದ್ಗಾರದ ನಡುವೆ 115ಕ್ಕೂ ಹೆಚ್ಚು ದೇಶಗಳ ಸುಂದರಿಯರನ್ನು ಹಿಂದಿಕ್ಕಿದ ಜೆನ್ನಿಫರ್, ಪ್ರತಿಷ್ಠಿತ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ವರ್ಷದ ಮಿಸ್ ಯೂನಿವರ್ಸ್ ವಿಜೇತೆ ಮೆಕ್ಸಿಕೊದ ಫಾತಿಮಾ ಬಾಷ್ ಅವರು ವೇದಿಕೆಯ ಮೇಲೆ ತಮ್ಮ ಉತ್ತರಾಧಿಕಾರಿ ಜೆನ್ನಿಫರ್ ಬ್ಯಾರೆಟೊ ಅವರಿಗೆ ವಜ್ರಖಚಿತ ಕಿರೀಟವನ್ನು ತೊಡಿಸಿ ಶುಭ ಹಾರೈಸಿದರು.
ಇತಿಹಾಸ ನಿರ್ಮಿಸಿದ ಜೆನ್ನಿಫರ್ ಬ್ಯಾರೆಟೊ!
ಜೆನ್ನಿಫರ್ ಬ್ಯಾರೆಟೊ ಅವರ ಈ ಗೆಲುವು ಕೇವಲ ಒಂದು ಸೌಂದರ್ಯ ಸ್ಪರ್ಧೆಯ ಜಯವಲ್ಲ, ಬದಲಾಗಿ ಮಿಸ್ ಯೂನಿವರ್ಸ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಿದೆ. ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದ ಮೊದಲ ವಿವಾಹಿತ ಮಹಿಳೆ ಹಾಗೂ ತಾಯಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಜೆನ್ನಿಫರ್ ಪಾತ್ರರಾಗಿದ್ದಾರೆ. 2023ರಲ್ಲಿ ಮಿಸ್ ಯೂನಿವರ್ಸ್ ಸಂಸ್ಥೆಯು ವಿವಾಹಿತ ಮಹಿಳೆಯರು ಮತ್ತು ತಾಯಂದಿರಿಗೂ ಸ್ಪರ್ಧಿಸಲು ಅವಕಾಶ ನೀಡಿ ನಿಯಮಾವಳಿಗಳಿಗೆ ತಿದ್ದುಪಡಿ ತಂದಿತ್ತು. 27 ವರ್ಷದ ಜೆನ್ನಿಫರ್ ಬ್ಯಾರೆಟೊ ಅವರು ಮನೋವಿಜ್ಞಾನಿ ಮತ್ತು ಕ್ಲಿನಿಕಲ್ ಸೋಶಿಯಲ್ ವರ್ಕರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಯುಎಸ್ ಸೇನಾಪಡೆಯ ಸಾರ್ಜೆಂಟ್ ಯಾನ್ ಕಾರ್ಲೋಸ್ ಬ್ಯಾರೆಟೊ ಅವರನ್ನು ವಿವಾಹವಾಗಿದ್ದಾರೆ ಹಾಗೂ 7 ವರ್ಷದ ಮಗಳ ತಾಯಿಯಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದ ಯಾವುದೇ ಪೂರ್ವಾನುಭವವಿಲ್ಲದೆ ಸ್ಪರ್ಧೆಗಿಳಿದು ವಿಶ್ವ ಸುಂದರಿ ಪಟ್ಟಕ್ಕೇರಿರುವುದು ವಿಶೇಷವಾಗಿದೆ.
ರನ್ನರ್ ಅಪ್ ಸ್ಥಾನ ಪಡೆದ ಸುಂದರಿಯರು ಯಾರು?
ಪೋರ್ಟೊ ರಿಕೊದ ರಾಜಧಾನಿ ಸ್ಯಾನ್ ಜುವಾನ್ನ ‘ಜೋಸ್ ಮಿಗುಯೆಲ್ ಅಗ್ರೆಲೋಟ್ ಕೊಲಿಸಿಯಂ’ನಲ್ಲಿ ನಡೆದ ಅದ್ಧೂರಿ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮವಾಗಿ ಟಾಪ್ 5 ಫೈನಲಿಸ್ಟ್ಗಳ ಪಟ್ಟಿಯಲ್ಲಿ ಫಿಲಿಪೈನ್ಸ್, ನ್ಯೂಜಿಲೆಂಡ್, ವೆನೆಜುವೆಲಾ, ಡೊಮಿನಿಕನ್ ರಿಪಬ್ಲಿಕ್ ಮತ್ತು ಪೋರ್ಟೊ ರಿಕೊ ದೇಶದ ಸ್ಪರ್ಧಿಗಳು ಸ್ಥಾನ ಪಡೆದಿದ್ದರು. ತೀವ್ರ ಪೈಪೋಟಿಯ ಬಳಿಕ ಡೊಮಿನಿಕನ್ ಗಣರಾಜ್ಯದ ಮೆಲಿಸ್ಸಾ ನುನೆಜ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ವೆನೆಜುವೆಲಾದ ಕ್ಲಾರಾ ವೇಗಾಸ್ ಗೊಯೆಟ್ಜ್ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನುಳಿದಂತೆ ಫಿಲಿಪೈನ್ಸ್ನ ಬೀ ಮಿಲನ್-ವಿಂಡೋರ್ಸ್ಕಿ ಮೂರನೇ ರನ್ನರ್ ಅಪ್ ಹಾಗೂ ನ್ಯೂಜಿಲೆಂಡ್ನ ಜಾರ್ಜಿಯಾ ವಾಡಿಂಗ್ಟನ್ ನಾಲ್ಕನೇ ರನ್ನರ್ ಅಪ್ ಸ್ಥಾನ ಪಡೆದರು.
ವಿಜೇತ ಪಟ್ಟ ತಂದುಕೊಟ್ಟ ಪ್ರಶ್ನೋತ್ತರ ಸುತ್ತು
ಅಂತಿಮ ಸುತ್ತಿನಲ್ಲಿ ಟಾಪ್ 5 ಫೈನಲಿಸ್ಟ್ಗಳಿಗೆ ತೀರ್ಪುಗಾರರು ಒಂದೇ ಸಾಮಾನ್ಯ ಪ್ರಶ್ನೆಯನ್ನು ಕೇಳಿದರು. ಇಂದಿನ ಜಗತ್ತಿಗೆ ತನ್ನ ನಾಯಕರಿಂದ ಅತ್ಯಂತ ತುರ್ತಾಗಿ ಏನು ಬೇಕಾಗಿದೆ? ಎಂಬ ಪ್ರಶ್ನೆಗೆ ಜೆನ್ನಿಫರ್ ಬ್ಯಾರೆಟೊ ನೀಡಿದ ಪ್ರಬುದ್ಧ ಉತ್ತರವು ತೀರ್ಪುಗಾರರು ಹಾಗೂ ಪ್ರೇಕ್ಷಕರ ಮನಗೆದ್ದಿತು. ಇಂದಿನ ಜಗತ್ತಿಗೆ ವೃತ್ತಿಪರವಾಗಿ ಸಹಾನುಭೂತಿ ಹೊಂದಿರುವ ನಾಯಕರ ಅಗತ್ಯವಿದೆ. ನಾವು ಇತರರನ್ನು ತೀರ್ಪು ಮಾಡುವ ಮತ್ತು ಪ್ರಶ್ನಿಸುವ ಜಗತ್ತಿನಲ್ಲಿ ಬದುಕುತ್ತಿದ್ದೇವೆ; ಆದರೆ ಒಬ್ಬ ನಿಜವಾದ ನಾಯಕ ತನ್ನ ಮೌಲ್ಯಗಳಿಗೆ ಬದ್ಧನಾಗಿ ನಿಂತು, ಸಮುದಾಯಗಳ ಸಮಸ್ಯೆಗಳನ್ನು ಆಲಿಸಿ, ಇತರರಿಗೆ ಮಾದರಿಯಾಗುವ ಮೂಲಕ ಉನ್ನತ ಮಟ್ಟವನ್ನು ಸ್ಥಾಪಿಸಬೇಕು ಎಂದು ಜೆನ್ನಿಫರ್ ಉತ್ತರಿಸಿದ್ದರು. ಈ ಉತ್ತರವೇ ಅವರಿಗೆ ವಿಶ್ವ ಸುಂದರಿ ಕಿರೀಟವನ್ನು ತಂದುಕೊಟ್ಟಿತು.
ಪೋರ್ಟೊ ರಿಕೊ ಮುಡಿಗೆ 6ನೇ ವಿಶ್ವ ಸುಂದರಿ ಕಿರೀಟ!
2026ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಜೆನ್ನಿಫರ್ ಬ್ಯಾರೆಟೊ ಅವರ ಗೆಲುವಿನೊಂದಿಗೆ, ಪೋರ್ಟೊ ರಿಕೊ ದೇಶವು ಬರೋಬ್ಬರಿ 20 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಮತ್ತೆ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಪೋರ್ಟೊ ರಿಕೊ ಒಟ್ಟು ಆರು ಬಾರಿ ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದ ಕೀರ್ತಿಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಮಾರಿಸೋಲ್ ಮಲಾರೆಟ್ (1970), ಡೆಬೊರಾ ಕಾರ್ತಿ-ಡೆಯು (1985), ದಯನಾರಾ ಟೊರೆಸ್ (1993), ಡೆನಿಸ್ ಕ್ವಿನೋನ್ಸ್ (2001) ಮತ್ತು ಜುಲೇಕಾ ರಿವೆರಾ (2006) ಅವರು ಪೋರ್ಟೊ ರಿಕೊಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. 75ನೇ ವಜ್ರ ಮಹೋತ್ಸವದ ಸವಿನೆನಪಿಗಾಗಿ ವಿನ್ಯಾಸಗೊಳಿಸಲಾಗಿದ್ದ 3,150 ವಜ್ರಗಳನ್ನು ಒಳಗೊಂಡ ‘ದಿ ರೇಡಿಯನ್ಸ್ ಆಫ್ ಎಟರ್ನಲ್ ಲೆಗಸಿ’ಕಿರೀಟವನ್ನು ಜೆನ್ನಿಫರ್ ಧರಿಸಿದ್ದಾರೆ.
ಭಾರತದ ಕಜಿಯಾ ಲಿಜ್ ಮೆಜೊ ಪಯಣ ಅಂತ್ಯ
ಇದೇ ವೇಳೆ, ಭಾರತವನ್ನು ಪ್ರತಿನಿಧಿಸಿದ್ದ ಕೇರಳ ಮೂಲದ 19 ವರ್ಷದ ಕಜಿಯಾ ಲಿಜ್ ಮೆಜೊ ಅವರು ಟಾಪ್ 30 ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರಾದರೂ, ಟಾಪ್ 12 ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿ ಸ್ಪರ್ಧೆಯಿಂದ ಹೊರಬಿದ್ದರು. 2021ರಲ್ಲಿ ಹರ್ನಾಜ್ ಸಂಧು ಕಿರೀಟ ಗೆದ್ದ ನಂತರ ಭಾರತಕ್ಕೆ ಮತ್ತೊಮ್ಮೆ ಮಿಸ್ ಯೂನಿವರ್ಸ್ ಕಿರೀಟ ದಕ್ಕಲಿಲ್ಲ. ಇನ್ನು 76ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸ್ಪರ್ಧೆಗೆ ವಿಯೆಟ್ನಾಂ ಆತಿಥ್ಯ ವಹಿಸಲಿದೆ ಎಂದು ಸಂಘಟಕರು ಘೋಷಿಸಿದ್ದಾರೆ.
#MissUniverse2026 #JenniferBarreto #PuertoRico #MissUniverse #75thMissUniverse #BeautyPageant #SanJuan #MissUniversePuertoRico #Udayakala #KannadaNews


