ಶಾಲೆಯ ಬಿಸಿಯೂಟ ತಯಾರಿಸುವಾಗ ಉಪ್ಪಿನ ಬದಲಾಗಿ ಡಿಟರ್ಜೆಂಟ್ ಪೌಡರ್ ಬಳಸಿದ ಪರಿಣಾಮವಾಗಿ ಆ ಊಟ ತಿಂದ 36 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ.
ನಳಂದಾ ನೂರ್ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಪರಾಸಿಯ ಮಿಡಲ್ ಸ್ಕೂಲ್ನಲ್ಲಿ ಈ ಘಟನೆ ನಡೆದಿದೆ. ಬಿಸಿಯೂಟ ಸೇವಿಸಿದ ಬಳಿಕ ಹಲವು ವಿದ್ಯಾರ್ಥಿಗಳಿಗೆ ತಲೆ ಸುತ್ತು ಹಾಗೂ ವಾಂತಿ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳನ್ನು ಬಿಹಾರ್ ಶರೀಫ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಸಿಯೂಟದಲ್ಲಿ ಉಪ್ಪಿನ ಕೊರತೆ ಇದೆ ಎಂದು ಕೆಲವರು ಗಮನಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಅಡುಗೆಮನೆಯಲ್ಲಿ ಉಪ್ಪು ಮತ್ತು ಡಿಟರ್ಜೆಂಟ್ ಪೌಡರ್ ಒಂದೇ ಸ್ಥಳದಲ್ಲಿ ಇಡಲಾಗಿತ್ತು, ಅಡುಗೆಯವರು ಡಿಟರ್ಜೆಂಟ್ ಪೌಡರ್ ಅನ್ನು ಉಪ್ಪು ಎಂದು ತಪ್ಪಾಗಿ ಭಾವಿಸಿ ಆಹಾರಕ್ಕೆ ಸೇರಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಿವಿಲ್ ಸರ್ಜನ್ ಡಾ. ಜಯ ಪ್ರಕಾಶ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಿಹಾರ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ. ವೈದ್ಯರಿಂದ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ರೀತಿಯ ಲೋಪ ಹೇಗೆ ಸಂಭವಿಸಿತು ಎಂಬುದರ ಕುರಿತು ವಿವರವಾದ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.


