ಉದಯಕಾಲ ನ್ಯೂಸ್, ವಾರಾಣಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಏಕ್ ಭಾರತ್, ಶ್ರೇಷ್ಠ ಭಾರತ್ ಪರಿಕಲ್ಪನೆಯಡಿ ಉತ್ತರ ಪ್ರದೇಶದ ಪವಿತ್ರ ನಗರಿ ವಾರಣಾಸಿಯಲ್ಲಿ ಇಂದಿನಿಂದ 15 ದಿನಗಳ ಕಾಲ ನಡೆಯಲಿರುವ ‘ಕಾಶಿ-ತಮಿಳು ಸಂಗಮಂ 5.0’ ಅದ್ಧೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಕಾಶಿ ಮತ್ತು ತಮಿಳುನಾಡಿನ ನಡುವಿನ ಸಹಸ್ರಾರು ವರ್ಷಗಳ ಪುರಾತನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ನಾಗರಿಕತೆಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಈ ಐತಿಹಾಸಿಕ ಉತ್ಸವಕ್ಕೆ ಇಂದು ವಾರಾಣಸಿಯ ನಮೋ ಘಾಟ್‌ನಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಡಿಸೆಂಬರ್ 12ರವರೆಗೆ ಜರುಗಲಿರುವ ಈ ಸಮಾರಂಭದ ಸಮಾರೋಪದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಪ್ರಹ್ಲಾದ್ ಜೋಶಿ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ವಾರಾಣಸಿಗೆ ಭೇಟಿ ನೀಡಿದ್ದ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಉತ್ತರ ಪ್ರದೇಶ ಸರ್ಕಾರದ ಉನ್ನತಾಧಿಕಾರಿಗಳು, ಕೇಂದ್ರ ಶಿಕ್ಷಣ ಇಲಾಖೆ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಹಾಗೂ ಐಐಟಿ ಮದ್ರಾಸ್‌ನ ಪ್ರಮುಖ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕಾರ್ಯಕ್ರಮದ ರೂಪುರೇಷೆ ಮತ್ತು ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿ ಪಡೆದರು. ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿರುವ ನಮೋ ಘಾಟ್‌ಗೆ ಖುದ್ದು ಭೇಟಿ ನೀಡಿ, ವೇದಿಕೆ, ಭದ್ರತೆ ಹಾಗೂ ಪ್ರತಿನಿಧಿಗಳ ವಸತಿ-ಸಾರಿಗೆ ವ್ಯವಸ್ಥೆಗಳನ್ನು ಪರಿಶೀಲಿಸಿ, ಯಾವುದೇ ಲೋಪದೋಷವಾಗದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ಆರಂಭವಾದ ಕಾಶಿ-ತಮಿಳು ಸಂಗಮಂ ಇಂದು ದೇಶದ ವಿವಿಧ ಭಾಷೆ, ಸಾಹಿತ್ಯ ಮತ್ತು ಪರಂಪರೆಗಳ ನಡುವಿನ ಬಾಂಧವ್ಯವನ್ನು ಬೆಸೆಯುವ ಬಲಿಷ್ಠ ವೇದಿಕೆಯಾಗಿ ರೂಪುಗೊಂಡಿದೆ. ಪ್ರಾಚೀನ ಕಾಲದಿಂದಲೂ ಭಾರತ ಸಾಂಸ್ಕೃತಿಕವಾಗಿ ಒಂದಾಗಿದೆ ಎಂಬ ಸತ್ಯವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.
ತಿರುಕ್ಕುರಳ್ ಕಲಿಯೋಣ ಈ ಬಾರಿಯ ವಿಶೇಷ ಧ್ಯೇಯವಾಕ್ಯ
ಐದನೇ ಆವೃತ್ತಿಯ ಕಾಶಿ-ತಮಿಳು ಸಂಗಮಂ ಕಾರ್ಯಕ್ರಮವನ್ನು ಶ್ರೇಷ್ಠ ತಮಿಳು ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರ ಅಮರ ಕೃತಿ ‘ತಿರುಕ್ಕುರಳ್’ಗೆ ಸಮರ್ಪಿಸಲಾಗಿದೆ. ಈ ಬಾರಿಯ ಉತ್ಸವಕ್ಕೆ ತಿರುಕ್ಕುರಳ್ ಪಯಿಲ್ವೋಂ – ತಿರುಕ್ಕುರಳ್ ಅಭ್ಯಾಸ್ ಕರೇನ್ ಎಂಬ ವಿಶೇಷ ವಿಷಯವಸ್ತುವನ್ನು ಆಯ್ಕೆ ಮಾಡಲಾಗಿದೆ. ಧರ್ಮ (ಅರಂ), ಅರ್ಥ (ಪೊರುಳ್) ಮತ್ತು ಕಾಮ (ಇನ್ಬಂ) ಎಂಬ ಮೂರು ವಿಭಾಗಗಳಲ್ಲಿ 1,330 ದ್ವಿಪದಿಗಳನ್ನು (ಕುರಳ್) ಹೊಂದಿರುವ ಈ ಕೃತಿಯ ನೈತಿಕ ಮತ್ತು ಜೀವನ ಮೌಲ್ಯಗಳನ್ನು ದೇಶಾದ್ಯಂತ ಪಸರಿಸುವುದು ಇದರ ಆಶಯವಾಗಿದೆ. ಸಂವಿಧಾನದ 8ನೇ ಪರಿಚ್ಛೇದದ ಎಲ್ಲಾ 22 ಭಾಷೆಗಳಲ್ಲೂ ತಿರುಕ್ಕುರಳ್ ಅನುವಾದವನ್ನು ಲಭ್ಯವಾಗಿಸಲಾಗಿದ್ದು, ವಾರಾಣಸಿಯ ಶಾಲಾ-ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ, ನಾಟಕ, ವಸ್ತುಪ್ರದರ್ಶನ ಮತ್ತು ಕ್ವಿಜ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
7 ತಂಡಗಳಲ್ಲಿ 1,400 ಪ್ರತಿನಿಧಿಗಳು ಭಾಗಿ
ಈ ಬಾರಿಯ ಸಂಗಮದಲ್ಲಿ ಪಾಲ್ಗೊಳ್ಳಲು ತಮಿಳುನಾಡಿನಿಂದ ಸುಮಾರು 46,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ ಆಯ್ಕೆಯಾದ 1,400 ಪ್ರತಿನಿಧಿಗಳು ತಲಾ 200 ಸದಸ್ಯರ ಏಳು ವಿಶೇಷ ತಂಡಗಳಲ್ಲಿ ಕಾಶಿಗೆ ಆಗಮಿಸುತ್ತಿದ್ದಾರೆ. ಕನ್ಯಾಕುಮಾರಿ, ಚೆನ್ನೈ ಮತ್ತು ಕೊಯಮತ್ತೂರಿನಿಂದ ಹೊರಡುವ ಈ ತಂಡಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು, ಮಾಧ್ಯಮ ಪ್ರತಿನಿಧಿಗಳು, ರೈತರು, ಕುಶಲಕರ್ಮಿಗಳು, ಮಹಿಳಾ ಸಾಧಕರು ಹಾಗೂ ಆಧ್ಯಾತ್ಮಿಕ ಗುರುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಒಳಗೊಂಡಿದ್ದಾರೆ.
ಕಾಶಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಯ ಪವಿತ್ರ ಯಾತ್ರೆ
ತಮಿಳುನಾಡಿನ ಪ್ರತಿನಿಧಿಗಳು ಎಂಟು ದಿನಗಳ ವಿಶೇಷ ಪ್ರವಾಸ ಕೈಗೊಳ್ಳಲಿದ್ದು, ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ, ಸಾರನಾಥ, ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ನಿವಾಸ, ಕೇದಾರ ಘಾಟ್ ಮತ್ತು ಗಂಗಾರತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇದರೊಂದಿಗೆ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮ ಹಾಗೂ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಸೇರಿದಂತೆ ದಕ್ಷಿಣ ಭಾರತದೊಂದಿಗೆ ಐತಿಹಾಸಿಕ ನಂಟು ಹೊಂದಿರುವ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.
ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಐಐಟಿ ಮದ್ರಾಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU), ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ (CICT) ಹಾಗೂ ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಈ ಬೃಹತ್ ಸಾಂಸ್ಕೃತಿಕ ಹಬ್ಬ ಆಯೋಜನೆಗೊಂಡಿದ್ದು, ಉತ್ತರ ಮತ್ತು ದಕ್ಷಿಣ ಭಾರತದ ಭಾವನಾತ್ಮಕ ಬೆಸುಗೆಗೆ ಹೊಸ ಭಾಷ್ಯ ಬರೆಯಲಿದೆ.
#KashiTamilSangamam #KTS5 #EkBharatShreshthaBharat #PralhadJoshi #CPRadhakrishnan #Varanasi #TamilNadu #Thirukkural #NamoGhat #IndianCulture #UdayakalaNews #BreakingNews


