Menu

ಕಾಕ್ರೋಚ್ ಪಕ್ಷಕ್ಕೆ ನನ್ನ ಬೆಂಬಲವಿಲ್ಲ: ಬಿಜೆಪಿ ಟೀಕೆಗಳಿಗೆ ಕೆ. ಅಣ್ಣಾಮಲೈ ಖಡಕ್ ತಿರುಗೇಟು!

ಉದಯಕಾಲ ನ್ಯೂಸ್, ಚೆನ್ನೈ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಕ್ಷ’ (CJP) ನಡೆಸಿದ ಪ್ರತಿಭಟನೆಗಳ ವೇಳೆ ಕೇಂದ್ರ ಸರ್ಕಾರ ಹಾಗೂ ಪೊಲೀಸರು ತೆಗೆದುಕೊಂಡ ಕ್ರಮವನ್ನು ಟೀಕಿಸಿ ವಿವಾದಕ್ಕೀಡಾಗಿದ್ದ ತಮಿಳುನಾಡು ಬಿಜೆಪಿ ಮಾಜಿ ಮುಖ್ಯಸ್ಥ ಕೆ. ಅಣ್ಣಾಮಲೈ ಈ ಕುರಿತು ಮೌನ ಮುರಿದು ಸ್ಪಷ್ಟನೆ ನೀಡಿದ್ದಾರೆ. ತಾವು ಅಭಿಜೀತ್ ದೀಪ್ಕೆ ನೇತೃತ್ವದ ಸಂಘಟನೆಗೆ ಬೆಂಬಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಣ್ಣಾಮಲೈ, ನಾನು ಎಂದಿಗೂ ಕಾಕ್ರೋಚ್ ಜನತಾ ಪಕ್ಷವನ್ನು ಬೆಂಬಲಿಸುವುದಿಲ್ಲ. ಅವರ ಕಾರ್ಯಸೂಚಿಯೇ ಬೇರೆ, ನಮ್ಮದೇ ಬೇರೆ. ಆದರೆ, ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಡುವ ಹಕ್ಕಿದೆ ಎಂಬುದನ್ನು ಮಾತ್ರ ನಾನು ತಿಳಿಸಿದ್ದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ವಲಯದಲ್ಲಿ ಆಕ್ಷೇಪ ಹಾಗೂ ಅಣ್ಣಾಮಲೈ ಆಕ್ರೋಶ

ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮವನ್ನು ಅಣ್ಣಾಮಲೈ ಪ್ರಶ್ನಿಸಿದ ಹಿನ್ನೆಲೆಯಲ್ಲಿ, ಅವರು ಅಭಿಜೀತ್ ದೀಪ್ಕೆ ಸಂಘಟನೆಗೆ ಬೆಂಬಲ ನೀಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಅಲ್ಲದೆ, ಸ್ವಪಕ್ಷೀಯರಿಂದಲೇ ಅವರು ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಈ ಟೀಕೆಗಳಿಗೆ ತಕ್ಕ ತಿರುಗೇಟು ನೀಡಿರುವ ಅಣ್ಣಾಮಲೈ, ತಮಗೆ ದೇಶಭಕ್ತಿಯ ಬಗ್ಗೆ ಯಾರಿಂದಲೂ ಉಪನ್ಯಾಸಗಳು ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.ನನಗೆ ದೇಶದ ಹಲವು ರಾಜ್ಯಗಳಲ್ಲಿ ಕೆಲಸ ಮಾಡಿದ ದೀರ್ಘ ಅನುಭವವಿದೆ.”ಭಾರತದ ಏಕತೆ ಮತ್ತು ಸಾರ್ವಭೌಮತ್ವ ಏನು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ, ಯಾರೂ ನನಗೆ ದೇಶಭಕ್ತಿಯ ಪಾಠ ಮಾಡುವುದು ಅಥವಾ ಉಪನ್ಯಾಸ ನೀಡುವುದು ಅಗತ್ಯವಿಲ್ಲ ಎಂದು ಅವರು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಕಾನೂನಿನ ಚೌಕಟ್ಟಿನಲ್ಲಿ ಕ್ರಮಕ್ಕೆ ಆಗ್ರಹ

ಸಿಜೆಪಿ ಪ್ರತಿಭಟನಾಕಾರರು ಏನಾದರೂ ತಪ್ಪು ಮಾಡಿದ್ದರೆ, ಸೇಡಿನ ರಾಜಕೀಯ ಅಥವಾ ವಿಧಾನವನ್ನು ಅಳವಡಿಸಿಕೊಳ್ಳುವ ಬದಲು ಅಧಿಕಾರಿಗಳು ಕೇವಲ ಕಾನೂನಿನ ಪ್ರಕಾರವೇ ಮುಂದುವರಿಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಸಾರ್ವಭೌಮತೆಗೆ ನಿಜಕ್ಕೂ ಅಪಾಯವಿದ್ದರೆ, ಸರ್ಕಾರದ ಬಳಿ ಎಲ್ಲಾ ಸಂಸ್ಥೆಗಳಿವೆ; ಅವುಗಳನ್ನು ಬಳಸಿ ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಿ. ಅದನ್ನು ಬಿಟ್ಟು ‘ಎಕ್ಸ್’ (X) ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿಗಳನ್ನು ಹರಿಬಿಡುವುದು ಸರಿಯಲ್ಲ ಎಂದು ಅವರು ತೀವ್ರವಾಗಿ ಟೀಕಿಸಿದರು.

ಪ್ರಧಾನಿ ಮೋದಿ ಕುರಿತು ಮೆಚ್ಚುಗೆ ಮತ್ತು ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅಣ್ಣಾಮಲೈ, ನರೇಂದ್ರ ಮೋದಿ ಅವರು ಅತ್ಯುತ್ತಮ ಪ್ರಧಾನಿ, ಅವರು ದೇಶಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಅದೇ ಸಮಯದಲ್ಲಿ ತಪ್ಪನ್ನು ಯಾರೇ ಮಾಡಿದ್ದರೂ ಅದನ್ನು ಪ್ರಶ್ನಿಸಲು ನಾನು ಎಂದಿಗೂ ಹಿಂಜರಿಯುವುದಿಲ್ಲ ಎಂದು ತಮ್ಮ ಸ್ಪಷ್ಟ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಗಳ ಕುರಿತು ಹಬ್ಬಿದ್ದ ಎಲ್ಲಾ ವಿವಾದಗಳಿಗೆ ಅವರು ತೆರೆ ಎಳೆದಿದ್ದಾರೆ.
#KAnnamalai #BJP #CockroachJanataParty #CJP #TamilNaduPolitics #UdayakalaNews #PoliticalNews #GyaneshKumar #ModiGovt

Related Posts

Leave a Reply

Your email address will not be published. Required fields are marked *