Wednesday, August 19, 2026
Menu

ಬಿಜೆಪಿ ವ್ಯೂಹಾತ್ಮಕ ಹೆಜ್ಜೆಗಳು

ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ  ಉಂಟಾಗಿರುವ ನಕಾರಾತ್ಮಕ ಜನವಿರೋಧಿ ಅಲೆ ಮತ್ತು ಕಾಕ್ರೋಚ್ ಜನತಾ ಪಾರ್ಟಿ ಎಸಗಿರುವ ಸವಾಲು, ಡಿಲಿಮಿಟೇಷನ್ ಮತ್ತು ಮಹಿಳಾ ಮೀಸಲಾತಿಗಳನ್ನು ಬಿಜೆಪಿ  ರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿ ಪರಿಣಿಸದೆ ಸುಮ್ಮನಿರಲು ಸಾಧ್ಯವೇ ಇಲ್ಲ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಘಟಕವನ್ನು ಮರುಚೇತನಗೊಳಿಸಲಾಗಿದೆ. ಉತ್ತರ ಪ್ರದೇಶ ಹಾಗೂ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. ಪಕ್ಷದ ಹಳೆಯ ಮುಖಗಳನ್ನು ಮತ್ತೆ ಪುನಶ್ಚೇತನದ ಕಾರ್ಯದಲ್ಲಿ ತೊಡಗಿಸುವ ದಿಶೆಯಲ್ಲಿ ರಾಜಾಸ್ಥಾನದ ವಸುಂಧರಾ ರಾಜೇ ಮತ್ತು ಉತ್ತರ ಪ್ರದೇಶದಲ್ಲಿ ರಾಹುಲ್‌ಗಾಂಧಿ ವಿರುದ್ದ ಸೋತ ಸ್ಮೃತಿ ಇರಾನಿ ಹಾಗೂ ಆಂಧ್ರದ ನೆಲದಲ್ಲಿ ಗಟ್ಟಿ ಬೇರೂರಲು ಸೀನಿಯರ್ ಎನ್‌ಟಿಆರ್ ಪುತ್ರಿ ಪುರಂದೇಶ್ವರಿ ಅವರಿಗೆ ಪಕ್ಷದ ಸಂಘಟನೆಗೆ ಅಗ್ರ ಮಣೆ ಹಾಕಿರುವುದು ಪಕ್ಷದ ವ್ಯೂಹಾತ್ಮಕ ಹೆಜ್ಜೆ.

ಕರ್ನಾಟಕದ ಉತ್ತರ ಭಾಗದಲ್ಲಿ ಈಗಲೂ ಬಿಜೆಪಿ ಹವಾ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಲು ಸಂಘ ಪರಿವಾರದ ಕಟ್ಟಾಳು ಡಾ. ಎಂ ನಾಗರಾಜ್ ಅವರಿಗೆ ಉಪಾಧ್ಯಕ್ಷರ ಹುದ್ದೆಯನ್ನು ನೀಡಲಾಗಿದೆ. ಭವಿಷ್ಯದಲಿ ನಾಗರಾಜ್, ಬಿಜೆಪಿಯನ್ನು ರಾಷ್ರೀಯ ಮಟ್ಟದಲ್ಲಿ ಮುನ್ನಡೆಸುವ ದಿನಗಳೂ ಬಹಳ ದೂರವಿಲ್ಲ.

ದೇಶದಲ್ಲಿ ಒಟ್ಟಾರೆ ಬಿಜೆಪಿ ಮುಂದಿನ ದಿನಗಳಲ್ಲಿ ತನ್ನ ಸಂಘಟನಾ ಶಕ್ತಿಯನ್ನು ದ್ವಿಗುಣಗೊಳಿಸಬೇಕಾದಲ್ಲಿ ಇತ್ತ ಪಾರ್ಟಿ, ಅತ್ತ ಸರ್ಕಾರವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವುದು ಅನಿವಾರ್ಯ. ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಯುವಜನತೆ ಮೇಲೆ ಉಂಟಾಗಿರುವ ನಕಾರಾತ್ಮಕ ಭಾವನೆ, ಜನವಿರೋಧಿ ಅಲೆ ಮತ್ತು ಕಾಕ್ರೋಚ್ ಜನತಾ ಪಾರ್ಟಿ ಎಸಗಿರುವ ಸವಾಲು ಮತ್ತು ಡೀಲಿಮಿಟೇಷನ್ ಮತ್ತು ಮಹಿಳಾ ಮೀಸಲಾತಿ – ಇವುಗಳನ್ನು ಬಿಜೆಪಿ ಗಂಭೀರವಾಗಿ ಪರಿಣಿಸದೆ ವಿಧಿಯಿಲ್ಲ. ಆದರೆ ಆರ್ ಎಸ್ ಎಸ್ ಕೃಪಾ ಕಟಾಕ್ಷ ಹೊಂದಿರುವ ಬಿಜೆಪಿಗೆ ಈಗ ಸಿಜೆಪಿ ಮತ್ತು ಯುವ ಸಮುದಾಯವನ್ನು ಹೇಗೆ ನಿಭಾಯಿಸಬೇಕೆಂಬ ಮಾರ್ಗಸೂಚಿ ಮತ್ತು ನೆರವು ಸಂಘ ಪರಿವಾರದ ಪ್ರಮುಖರಿಂದಲೇ ದೊರೆಯುದು ನಿಶ್ಚಿತ. ಇದಕ್ಕೆ ಸಂಘವು ಈಗಾಗಲೇ ನೀಲನಕ್ಷೆ ರೂಪಿಸಿ ಕಾರ್ಯಾಚರಣೆಯಲ್ಲಿ ತೊಡಗಿದೆ.

ದಕ್ಷಿಣ ಭಾರತದ ಕಾಂಗ್ರೆಸ್, ಅಣ್ಣಾಡಿಎಂಕೆ, ಟಿಡಿಪಿ ಮತ್ತು ಬಿ ಆರ್ ಎಸ್ ಅಲ್ಲದೆ ಜೆಡಿಎಸ್ ನಾಡಿಯನ್ನು ಅರಿತಿರುವ ಬಿ. ಎಲ್. ಸಂತೋಷ್, ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿದಿದ್ದು ಪವನ್ ಕಲ್ಯಾಣ್ , ಚಂದ್ರಬಾಬು, ಮೊದಲಾದ ನಾಯಕರ ನಡುವೆ ರಾಜಕೀಯ ಸೌಹಾರ್ದತೆ, ಸಂಧಾನ ಮತ್ತು ಸಮನ್ವಯತೆ ಕಾಪಾಡಲು ಪಕ್ಷಕ್ಕೆ ಬೇಕಿರುವ ಅನಿವಾರ್ಯ ವ್ಯಕ್ತಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ೨೦೨೯ರಲ್ಲೂ ಬಿಜೆಪಿ ದಿಲ್ಲಿಯಲ್ಲಿ ವಿಜಯಪತಾಕೆಯನ್ನು ಹಾರಿಸಬೇಕಿದ್ದರೆ ರಾಜಾಸ್ಥಾನ, ಉತ್ತರ ಪ್ರದೇಶ, ಬಿಹಾರ, ಆಂಧ್ರ , ತೆಲಂಗಾಣ ಮತ್ತು ಕರ್ನಾಟಕದಲ್ಲಿ ಭರ್ಜರಿ ಜಯಗಳಿಸುವುದು ಅನಿವಾರ್ಯ. ಮಿಗಿಲಾಗಿ ಮಧ್ಯಪ್ರದೇಶ, ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರ ಈ ನಾಲ್ಕು ಪ್ರಮುಖ ರಾಜ್ಯಗಳ ನಿಗಾ ಮತ್ತು ಉಸ್ತುವಾರಿಯ ಹೊಣೆ ಮೋದಿ ಮತ್ತು ಅಮಿತ್‌ಶಾ ಅವರ ಮೇಲೆಯೇ ಇದೆ ಮತ್ತು ಇರುತ್ತೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

Related Posts

Leave a Reply

Your email address will not be published. Required fields are marked *