ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಹೆಚ್ಚುತ್ತಿರುವಂತೆಯೇ ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದೆ. ತಪಾಸಣೆಯ ವೇಳೆ ಕೋಳಿಗಳಲ್ಲಿ ಈ ಸೋಂಕು ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಫಾರಂ ಅನ್ನು ಮುಚ್ಚಲಾಗಿದ್ದು, ಈ ಪ್ರದೇಶದಿಂದ ರಾಜ್ಯದ ವಿವಿಧ ಭಾಗಗಳಿಗೆ ಕೋಳಿ ಸರಬರಾಜು ಆಗುತ್ತಿದ್ದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಬರ್ಡ್ ಫ್ಲೂ ವೈರಸ್ ಸೋಂಕು ಆಗಿದ್ದು, ಪಕ್ಷಿಗಳಿಗೆ ಮಾತ್ರವಲ್ಲದೆ ಮನುಷ್ಯರು ಮತ್ತು ಇತರ ಪ್ರಾಣಿಗಳಲ್ಲಿಯೂ ಕಂಡು ಬರುತ್ತದೆ.
ಪೌಲ್ಟ್ರಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಕೋಳಿ ಸಾಕಾಣಿಕೆದಾರರನ್ನು ವೈದ್ಯಾಧಿಕಾರಿಗಳು ಕ್ವಾರಂಟೈನ್ ಮಾಡಿ ಸುತ್ತಮುತ್ತಕೋಳಿ ಶೆಡ್‌ಗಳಲ್ಲೂ ತಪಾಸಣೆ ನಡೆಸುವಂತೆ ಪಶುವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಎಚ್ಚರಿಕೆ ನೋಟಿಸ್ ನೀಡಲಾಗಿದೆ.
ಕೋಳಿ ಸಾಕಣಿಕೆ ಕೇಂದ್ರಗಳು ಹಾಗೂ ಕೋಳಿ ಅಂಗಡಿಗಳಲ್ಲಿ ವಿಶೇಷ ಪರಿಶೀಲನೆ ನಡೆಲಾಗುತ್ತಿದೆ. ಬಿಸಿಲು, ತಾಪಮಾನ ಹೆಚ್ಚಿರುವುದರಿಂದ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ. ಮನುಷ್ಯರಿಗೂ ಹರಡಬಹುದು. ಆದ್ದರಿಂದ ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಸೋಂಕಿತ ಹಕ್ಕಿಗಳನ್ನು ಸ್ಪರ್ಶಿಸಬಾರದು. ಆಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಹಸಿ ಮೊಟ್ಟೆ ಮತ್ತು ಸರಿಯಾಗಿ ಬೇಯಿಸದ ಮಾಂಸವನ್ನು ತಿನ್ನಬಾರದು. ಕೈಗಳನ್ನು ನಿಯಮಿತವಾಗಿ ತೊಳೆಯುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು ಅಗತ್ಯ ಎಂದು ಹೇಳಿದ್ದಾರೆ.


