ಉದಯಕಾಲ ನ್ಯೂಸ್, ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರ ಅಚ್ಚುಮೆಚ್ಚಿನ ಆಹಾರವಾಗಿರುವ ಜೋಳದ ರೊಟ್ಟಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಜೋಳದ ಬೆಲೆ ಗಗನಕ್ಕೇರಿದ್ದು, ಕೆ.ಜಿಗೆ 100 ರೂ. ಗಡಿ ದಾಟಿದೆ. ಕೆಲವೇ ತಿಂಗಳ ಹಿಂದೆ ಕ್ವಿಂಟಾಲ್‌ಗೆ 5 ಸಾವಿರ ರೂ. ಇದ್ದ ಜೋಳ ಈಗ 9 ರಿಂದ 10 ಸಾವಿರ ರೂ.ಗಳಿಗೆ ತಲುಪಿದೆ. ಇದರಿಂದ ರೊಟ್ಟಿ ಊಟವನ್ನೇ ನಂಬಿ ಬದುಕುಳಿದಿರುವ ನೂರಾರು ಖಾನಾವಳಿಗಳು ಹಾಗೂ ಸಾಮಾನ್ಯ ಜನರ ಮೇರೆಗೆ ದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ.
ವಾಣಿಜ್ಯ ಬೆಳೆಗಳತ್ತ ಒಲವು, ಬೆಲೆ ಏರಿಕೆಗೆ ಕಾರಣ
ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಕೊರತೆ ಹಾಗೂ ಬರಗಾಲದ ವಾತಾವರಣದಿಂದಾಗಿ ಜೋಳದ ಉತ್ಪಾದನೆ ಮತ್ತು ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗಿದೆ. ಇದರೊಂದಿಗೆ ರೈತರು ಸಾಂಪ್ರದಾಯಿಕ ಆಹಾರ ಧಾನ್ಯಗಳಾದ ಜೋಳ ಹಾಗೂ ಗೋಧಿಯ ಬದಲಾಗಿ ಕಡಲೆ, ಈರುಳ್ಳಿ, ಮೆಣಸಿನಕಾಯಿ, ಗೋವಿನಜೋಳ ಹಾಗೂ ಸೂರ್ಯಕಾಂತಿಯಂತಹ ವಾಣಿಜ್ಯ ಬೆಳೆಗಳ ಬಿತ್ತನೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಜೋಳದ ಬಿತ್ತನೆ ಪ್ರದೇಶ ಗಣನೀಯವಾಗಿ ಕುಸಿದಿದ್ದು, ಮಾರುಕಟ್ಟೆಯಲ್ಲಿ ಅದರಲ್ಲೂ ವಿಶೇಷವಾಗಿ ಮಾಲ್ದಂಡಿ ಮತ್ತು ಗುಂಡು ತೆನೆ ಜೋಳದ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿ ಬೆಲೆ ದುಪ್ಪಟ್ಟಾಗಲು ಕಾರಣವಾಗಿದೆ.

ರೊಟ್ಟಿ ಇಲ್ಲದೆ ಖಾನಾವಳಿ ನಡೆಯದು: ನಗಗರದ ಲ್ಯಾಮಿಂಗ್ಟನ್ ರಸ್ತೆಯ ಬಸವೇಶ್ವರ ಖಾನಾವಳಿ ಮಾಲೀಕ ಅಪ್ಪಣ್ಣ ನದಾಫ್ ಹೇಳುವಂತೆ ಉತ್ತರ ಕರ್ನಾಟಕದ ಪ್ರಮುಖ ಆಹಾರವೇ ರೊಟ್ಟಿ. ರೊಟ್ಟಿ ಇಲ್ಲದಿದ್ದರೆ ಖಾನಾವಳಿಯೇ ನಡೆಯುವುದಿಲ್ಲ. ನಮ್ಮಲ್ಲಿ ಶೇ.100ರಷ್ಟು ಗ್ರಾಹಕರು ರೊಟ್ಟಿ ಇಲ್ಲದೆ ಊಟ ಮಾಡುವುದಿಲ್ಲ. ಈ ಹಿಂದೆ ಕೆ.ಜಿ.ಗೆ 40ರಿಂದ 50 ರೂ ಆಸುಪಾಸಿನಲ್ಲಿ ಸಿಗುತ್ತಿದ್ದ ಜೋಳದ ಬೆಲೆ ಈಗ 100 ರೂ ದಾಟಿದೆ. ಇದರಿಂದ ಖಾನಾವಳಿ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೋಳದ ಬೆಲೆ ಏರಿಕೆಯಾಗಿದೆ ಎಂದು ನಾವು ಊಟದ ದರ ಹೆಚ್ಚಿಸಿದರೆ ಗ್ರಾಹಕರು ಕಡಿಮೆಯಾಗುವ ಆತಂಕವಿದೆ. ಜೋಳದ ಜೊತೆಗೆ ಅಕ್ಕಿಯ ಬೆಲೆಯೂ ಹೆಚ್ಚಾಗಿದ್ದು, ಖಾನಾವಳಿ ನಡೆಸುವುದೇ ಕಷ್ಟದ ಕೆಲಸವಾಗಿದೆ. ಸದ್ಯ ಒಂದು ಊಟಕ್ಕೆ 120 ರೂ ದರ ನಿಗದಿಪಡಿಸಿದ್ದು, ಇದುವರೆಗೆ ಯಾವುದೇ ದರ ಏರಿಕೆ ಮಾಡಿಲ್ಲ. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ ಅನಿವಾರ್ಯವಾಗಿ ಊಟದ ದರ ಹೆಚ್ಚಿಸಬೇಕಾಗುತ್ತದೆ. ಇದರಿಂದ ಗ್ರಾಹಕರಿಗೂ ಹೊರೆ, ಖಾನಾವಳಿ ಮಾಲೀಕರಿಗೂ ಆರ್ಥಿಕ ಸಂಕಷ್ಟ ಎದುರಾಗಲಿದೆ” ಎಂದು ಅಳಲು ತೋಡಿಕೊಂಡರು.
ಖಾನಾವಳಿ ಮಾಲೀಕರ ಪರದಾಟ ಹಾಗೂ ಊಟದ ದರ ಹೆಚ್ಚಳದ ಆತಂಕ
ಜೋಳದ ಬೆಲೆ ಏರಿಕೆಯಿಂದಾಗಿ ಪ್ರತಿದಿನ ನೂರಾರು ಗ್ರಾಹಕರಿಗೆ ಊಟ ನೀಡುವ ಖಾನಾವಳಿ ಮಾಲೀಕರು ಕಚ್ಚಾ ವಸ್ತುಗಳ ನಿರ್ವಹಣೆ ಮಾಡಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಜೋಳದ ಜೊತೆಗೆ ಅಕ್ಕಿ, ಸಜ್ಜೆ ಮತ್ತು ಬೇಳೆಕಾಳುಗಳ ಬೆಲೆಯೂ ಹೆಚ್ಚಾಗಿದೆ. ಸದ್ಯ ಒಂದು ಸಾಮಾನ್ಯ ಊಟಕ್ಕೆ 120 ರೂ. ನಿಗದಿಪಡಿಸಲಾಗಿದ್ದು, ಗ್ರಾಹಕರಿಗೆ ಹೊರೆಯಾಗಬಾರದೆಂಬ ಕಾರಣಕ್ಕೆ ದರ ಹೆಚ್ಚಿಸಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇದೇ ಸ್ಥಿತಿ ಮುಂದುವರೆದರೆ ಅನಿವಾರ್ಯವಾಗಿ ರೊಟ್ಟಿ ಊಟದ ದರ ಹೆಚ್ಚಿಸಬೇಕಾಗುತ್ತದೆ. ಸರ್ಕಾರ ಕೂಡಲೇ ಜೋಳ ಬೆಳೆಯುವ ರೈತರಿಗೆ ಸೂಕ್ತ ಪ್ರೋತ್ಸಾಹ ಹಾಗೂ ಬೆಂಬಲ ಬೆಲೆ ನೀಡಿ, ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಖಾನಾವಳಿ ಮಾಲೀಕರು ಒತ್ತಾಯಿಸಿದ್ದಾರೆ.
#JowarPriceHike #NorthKarnataka #Khanavali #RotiMeals #AgriculturalNews #FoodInflation #UdayakalaNews #KarnatakaEconomy


