Thursday, November 12, 2026
Menu

ಕೇಜ್ರಿವಾಲ್‌ಗೆ ಕೊಲೆ ಬೆದರಿಕೆ: ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ 7 ಕೋಟಿಗೆ ಬೇಡಿಕೆ

ಉದಯಕಾಲ ನ್ಯೂಸ್, ನವದೆಹಲಿ: ಆಮ್ ಆದ್ಮಿ ಪಾರ್ಟಿಯ (AAP) ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೀವ ಬೆದರಿಕೆ ಬಂದಿರುವ ಗಂಭೀರ ಘಟನೆ ವರದಿಯಾಗಿದೆ. ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹೆಸರನ್ನು ಬಳಸಿ ವ್ಯಕ್ತಿಯೋರ್ವ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಬರೋಬ್ಬರಿ 7 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿರುವುದು ಆತಂಕ ಮೂಡಿಸಿದೆ.

ಶಾಸಕ ಜರ್ನೈಲ್ ಸಿಂಗ್‌ಗೆ ಬೆದರಿಕೆ ಕರೆ

ವರದಿಗಳ ಪ್ರಕಾರ, ನವೆಂಬರ್ 6ರಂದು ಅಪರಿಚಿತ ವ್ಯಕ್ತಿಯೋರ್ವ ಎಎಪಿಯ ತಿಲಕ್ ನಗರ ಶಾಸಕ ಜರ್ನೈಲ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಹಾಗೂ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಈ ಬೆದರಿಕೆ ಹಾಕಿದ್ದಾನೆ. ತಾನು ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾಗಿದ್ದೇನೆ. ತಕ್ಷಣವೇ 7 ಕೋಟಿ ರೂ. ಹಣ ನೀಡಿ, ಇಲ್ಲದಿದ್ದರೆ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಮಗಳನ್ನು ಕೊಲೆ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದುಬಂದಿದೆ. ಈ ಬೆದರಿಕೆ ಸಂದೇಶದಿಂದ ಆಘಾತಗೊಂಡ ಶಾಸಕ ಜರ್ನೈಲ್ ಸಿಂಗ್ ಅವರು ಕೂಡಲೇ ಎಚ್ಚೆತ್ತುಕೊಂಡು ಮೊಹಾಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು (SSP) ಸಂಪರ್ಕಿಸಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ಮೊಹಾಲಿ ಪೊಲೀಸರಿಂದ ಪ್ರಕರಣ ದಾಖಲು ಹಾಗೂ ತನಿಖೆ ತೀವ್ರ

ಶಾಸಕರು ನೀಡಿದ ದೂರಿನ ಆಧಾರದ ಮೇಲೆ ಎಚ್ಚೆತ್ತ ಮೊಹಾಲಿ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸೈಬರ್ ಕ್ರೈಮ್ ಪೊಲೀಸ್ ಸ್ಟೇಷನ್‌ನ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರಿಗೆ ವಹಿಸಲಾಗಿದ್ದು, ಕರೆ ಮಾಡಿರುವ ವ್ಯಕ್ತಿ ಹಾಗೂ ಸಂದೇಶ ಕಳುಹಿಸಿರುವ ಮೂಲದ ಬಗ್ಗೆ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ. ಪ್ರಮುಖ ರಾಜಕೀಯ ನಾಯಕರಿಗೆ ಈ ರೀತಿಯ ಜೀವ ಬೆದರಿಕೆಗಳು ಬರುತ್ತಿರುವುದು ದೆಹಲಿ ಹಾಗೂ ಪಂಜಾಬ್ ರಾಜಕೀಯ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
#ArvindKejriwal #LawrenceBishnoi #DeathThreat #AAP #MohaliPolice #JarnailSingh #CyberCrime #UdayakalaNews

Related Posts

Leave a Reply

Your email address will not be published. Required fields are marked *