Tuesday, November 03, 2026
Menu

ಹಾಡಹಗಲೇ ಸರಗಳ್ಳತನಕ್ಕೆ ಯತ್ನಿಸಿದ ಕಳ್ಳನಿಗೆ ಧರ್ಮದೇಟು,ಕುಖ್ಯಾತ ಆರೋಪಿ ಅರೆಸ್ಟ್

ಉದಯಕಾಲ ನ್ಯೂಸ್, ಬೆಂಗಳೂರು: ನಗರದಲ್ಲಿ ಹಾಡಹಗಲೇ ನಡೆದ ಬೆಚ್ಚಿಬೀಳಿಸುವ ಸರಗಳ್ಳತನದ ಯತ್ನ ಹಾಗೂ ಮಹಿಳೆಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರ ಠಾಣೆಯ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಅಕ್ಟೋಬರ್ 31ರಂದು ಬೆಳಗ್ಗೆ ಇಂದಿರಾನಗರದ ಜನನಿಬಿಡ 100 ಫೀಟ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರ ಕಣ್ಮುಂದೆಯೇ ಮಹಿಳೆಯ ಕತ್ತಿಗೆ ಚಾಕು ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದವು. ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮಟೆ ಅವರು ಪ್ರಭುರಾಜ್ (40) ಬಂಧಿತ ಆರೋಪಿ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೈಗಳ ಅಂಟಿಸಿ, ಮಾಂಗಲ್ಯ ಸರ ಕಸಿದುಕೊಂಡು ವಿಕೃತಿ

ಅಕ್ಟೋಬರ್ 31ರಂದು ಬೆಳಗ್ಗೆ 11:45ರ ಸುಮಾರಿಗೆ ಹೆಲ್ಮೆಟ್ ಹಾಗೂ ಕೈಗವಸು ಧರಿಸಿ ಪ್ರೀಮಿಯಂ ಶೂ ಆ್ಯಂಡ್ ಬ್ಯಾಗ್ ರಿಪೇರಿ ಅಂಗಡಿಗೆ ನುಗ್ಗಿದ ಆರೋಪಿ ಪ್ರಭುರಾಜ್ ಏಕಾಏಕಿ ಕೌಂಟರ್ ಮೇಲೆ ಹಾರಿದ್ದಾನೆ. ಕೌಂಟರ್‌ನಲ್ಲಿದ್ದ ಜಯಶ್ರೀ ಅವರು ಮಾಲೀಕರಿಗೆ ಕರೆ ಮಾಡಲು ಮುಂದಾದಾಗ, ಅವರನ್ನು ಬಲವಂತವಾಗಿ ಕೆಳಗೆ ಕೂರಿಸಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಬಳಿಕ ಫೆವಿಕ್ವಿಕ್ ಬಳಸಿ ಆಕೆಯ ಎರಡೂ ಕೈಗಳನ್ನು ಡೆಸ್ಕ್‌ಗೆ ಅಂಟಿಸಿ, ಬಾಯಿಗೆ ಬಟ್ಟೆ ತುರುಕಿ ವಿಕೃತಿ ಮೆರೆದಿದ್ದಾನೆ. ನಂತರ ಕುತ್ತಿಗೆ ಹಾಗೂ ಕೈಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿ ಸುಮಾರು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾನೆ.

ಸಾರ್ವಜನಿಕರಿಂದ ಧರ್ಮದೇಟು – ಸಂಚಾರ ಪೊಲೀಸರಿಂದ ಬಂಧನ

ಆರೋಪಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಜಯಶ್ರೀ ಅವರು ತಮ್ಮ ಕೈಗಳನ್ನು ಹೇಗೋ ಬಿಡಿಸಿಕೊಂಡು ಜೋರಾಗಿ ಕಿರುಚಿಕೊಂಡಿದ್ದಾರೆ. ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಅಂಗಡಿ ಮಾಲೀಕ ರಂಜಿತ್ ಕುಮಾರ್ ಹಾಗೂ ಸಾರ್ವಜನಿಕರನ್ನು ಕಂಡು ಬೆಚ್ಚಿದ ಆರೋಪಿ, ಜಯಶ್ರೀ ಅವರ ಕೂದಲು ಹಿಡಿದು ನಡುರಸ್ತೆಯಲ್ಲೇ ಎಳೆದಾಡಿ ಬೆದರಿಕೆ ಹಾಕಿದ್ದಾನೆ. ತಕ್ಷಣವೇ ಎಚ್ಚೆತ್ತ ಸ್ಥಳೀಯರು ಆರೋಪಿಯನ್ನು ಥಳಿಸಿದ್ದಾರೆ ಹಾಗೂ ಅಲ್ಲೇ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಧೈರ್ಯಪ್ರದರ್ಶಿಸಿ, ಆರೋಪಿಯನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಭೀಕರ ಹಲ್ಲೆಯಲ್ಲಿ ಗಾಯಗೊಂಡಿರುವ ಜಯಶ್ರೀ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

#BengaluruCrime #Indiranagar #ChainSnatching #PoliceArrest #UdayakalaNews #WomenSafety #KarnatakaNews

Related Posts

Leave a Reply

Your email address will not be published. Required fields are marked *