Tuesday, November 03, 2026
Menu

ಸ್ಟಿಂಗ್ ವಿಚಾರ ಎತ್ತಿದ ಕಾಂಗ್ರೆಸ್‌ ಬುಡಕ್ಕೇ ಬೆಂಕಿ: ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ ವಿವಾದದ ವಿಚಾರವಾಗಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ಟಿಂಗ್ ವಿಚಾರವನ್ನು ಮುನ್ನೆಲೆಗೆ ತರುವ ಮೂಲಕ ಕಾಂಗ್ರೆಸ್ ಪಕ್ಷದವರೇ ತಮ್ಮ ಬುಡಕ್ಕೆ ತಾವೇ ಬೆಂಕಿ ಇಟ್ಟುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ

ಸ್ಟಿಂಗ್ ವಿಚಾರದಲ್ಲಿ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತೀವ ಬೇಸರಗೊಂಡು ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಅವರ ಹೇಳಿಕೆಗಳು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗಳನ್ನು ತಾವು ಗಮನಿಸಿರುವುದಾಗಿ ತಿಳಿಸಿದರು. ಸರ್ಕಾರವು ಕೇವಲ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡುತ್ತಿದೆಯೇ ಹೊರತು, ಸ್ಟಿಂಗ್ ಹಿಂದೆ ಇರುವವರು ಯಾರು ಮತ್ತು ಅದರ ಅಸಲಿ ಉದ್ದೇಶವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿಲ್ಲ ಎಂದು ಕಿಡಿಕಾರಿದರು. ಅಧಿಕಾರದ ದಾಹದಿಂದಲೇ ಈ ಸ್ಟಿಂಗ್ ಮಾಡಲಾಗಿದೆ ಎಂಬ ಆರೋಪ ಸ್ವತಃ ಕಾಂಗ್ರೆಸ್ ಪಕ್ಷದ ಒಳಗಡೆಯೇ ಕೇಳಿಬರುತ್ತಿದ್ದು, ಇದು ಅಂತಿಮವಾಗಿ ಸ್ವತಃ ಮುಖ್ಯಮಂತ್ರಿಗಳ ಸ್ಥಾನಕ್ಕೇ ಕುತ್ತು ತರಲಿದೆ ಎಂದು ಭವಿಷ್ಯ ನುಡಿದರು.

ದಾವಣಗೆರೆ ಹೇಳಿಕೆಗೆ ಸ್ಪಷ್ಟನೆ ಹಾಗೂ ಕ್ಷಮೆಯಾಚನೆ

ಇದೇ ವೇಳೆ, ದಾವಣಗೆರೆಯಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ತವು ಬಳಸಿದ ಆಕ್ಷೇಪಾರ್ಹ ಪದಬಳಕೆಯ ಬಗ್ಗೆಯೂ ವಿಜಯೇಂದ್ರ ಪ್ರತಿಕ್ರಿಯಿಸಿದರು. ತಾನು ಉದ್ದೇಶಪೂರ್ವಕವಾಗಿ ಆ ಪದಗಳನ್ನು ಬಳಸಿಲ್ಲ ಎಂದ ಅವರು, ತಮ್ಮ ಮಾತಿನಿಂದ ಕಾಂಗ್ರೆಸ್ ನಾಯಕರಿಗೆ ನೋವಾಗಿದ್ದರೆ ಮುಕ್ತ ಮನಸ್ಸಿನಿಂದ ಕ್ಷಮೆ ಯಾಚಿಸುವುದಾಗಿ ತಿಳಿಸಿದರು. ಮೀಸಲಾತಿ ವಿಚಾರದಲ್ಲಿ ಸರ್ಕಾರ ಸುಪ್ರೀಂಕೋಟ್‌ನಲ್ಲಿ ಸರಿಯಾದ ವಾದ ಮಂಡಿಸದ ಕಾರಣ ಯುವಕರು ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರ ಉದಾಸೀನತೆ ಮತ್ತು ಉದ್ಯೋಗ ನೀಡುವಲ್ಲಿ ಸರ್ಕಾರದ ವಿಫಲತೆಯೇ ಈ ಆಕ್ರೋಶಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದರು.
#BYVijayendra #CongressStingOp #ExCMSiddaramaiah #BJPKarnataka #UdayakalaNews #PoliticalNews #KarnatakaPolitics

Related Posts

Leave a Reply

Your email address will not be published. Required fields are marked *