ಕೀವ್(ಉಕ್ರೇನ್): ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ದಕ್ಷಿಣ ಉಕ್ರೇನ್ನ ಝಪೊರಿಝಿಯಾ ಪ್ರದೇಶದ ಮೇಲೆ ರಷ್ಯಾ ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ. ಮಾನವೀಯ ನೆರವು ವಿತರಿಸುತ್ತಿದ್ದ ಕೇಂದ್ರ ಹಾಗೂ ಅದರ ಪಕ್ಕದಲ್ಲಿದ್ದ ಆಶ್ರಯ ತಾಣವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದ್ದು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಹಾಗೂ ಆಶ್ರಯ ತಾಣದ ಮೇಲೆ ದಾಳಿ
ದಕ್ಷಿಣದ ಝಪೊರಿಝಿಯಾ ಪ್ರದೇಶದ ಕೊಮಿಶುವಖಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಾನವೀಯ ನೆರವು ವಿತರಿಸಲು ಬಳಸುತ್ತಿದ್ದ ಶಾಲಾ ಕಟ್ಟಡ ಹಾಗೂ ಅದರ ಹತ್ತಿರದಲ್ಲಿದ್ದ ಆಶ್ರಯ ತಾಣದ ಮೇಲೆ ರಷ್ಯಾ ಸರಣಿ ಬಾಂಬ್ ದಾಳಿ ನಡೆಸಿದೆ. ಘಟನೆಯಲ್ಲಿ ಸುಮಾರು 26 ಜನ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸೋಮವಾರ ಸಂಜೆ ತುರ್ತು ಸೇವಾ ಸಿಬ್ಬಂದಿ ಟಾರ್ಚ್ಗಳ ಸಹಾಯದಿಂದ ಕುಸಿದುಬಿದ್ದ ಕಟ್ಟಡಗಳ ಅವಶೇಷಗಳ ನಡುವೆ ರಕ್ಷಣಾ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ, ರಷ್ಯಾದ ಡ್ರೋನ್ಗಳು ಮತ್ತೆ ದಾಳಿ ನಡೆಸಿ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಪಡಿಸಿವೆ. ಉಕ್ರೇನ್ನ ಇತರ ಭಾಗಗಳಲ್ಲೂ ರಷ್ಯಾ ಡ್ರೋನ್ ದಾಳಿ ಮುಂದುವರಿದಿದ್ದು, ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ.
ರಷ್ಯಾ ನಿರಂತರ ಯುದ್ಧ: ಉಕ್ರೇನಿಗೆ ಕ್ಷಿಪಣಿಗಳ ಕೊರತೆ
ಇದೇ ಸಮಯದಲ್ಲಿ ದೇಶದ ದಕ್ಷಿಣ ಭಾಗದ ಖೆರ್ಸನ್ನಲ್ಲಿ ಜಾರಿಯಲ್ಲಿದ್ದ ಸೀಮಿತ ಕದನ ವಿರಾಮ ಒಪ್ಪಂದವು ಮುಕ್ತಾಯಗೊಂಡಿದೆ. ಈ ಒಪ್ಪಂದವು ಮುಂಚೂಣಿ ವಲಯಗಳಿಗೆ ಮಾನವೀಯ ನೆರವು ತಲುಪಿಸಲು ಮತ್ತು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅವಕಾಶ ಕಲ್ಪಿಸಿತ್ತು.ಶಾಂತಿಯತ್ತ ಹೆಜ್ಜೆ ಇಡಬೇಕಿದ್ದ ಸಮಯದಲ್ಲಿ ರಷ್ಯಾ ಇಂತಹ ಹತ್ಯೆಗಳ ಮೂಲಕ ಮತ್ತೊಮ್ಮೆ ತಾನು ಸಂಘರ್ಷ ನಿಲ್ಲಿಸಲು ಬಯಸುತ್ತಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಝೆಲೆನ್ಸ್ಕಿ ಕಿಡಿಕಾರಿದ್ದಾರೆ. ಈಗಾಗಲೇ ದೇಶವು ಅಗತ್ಯವಿರುವ ಕ್ಷಿಪಣಿಗಳ ಗಂಭೀರ ಕೊರತೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ರಷ್ಯಾ ತನ್ನ ದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಉಕ್ರೇನ್ ತೀವ್ರ ಆತಂಕ ವ್ಯಕ್ತಪಡಿಸಿದೆ.
#RussiaUkraineWar #Zaporizhzhia #VolodymyrZelensky #UkraineNews #UdayakalaNews #WorldNews #Airstrike

